ತಾಲ್ಲೂಕಿನ ಹಂಡಿಗನಾಳ ಮತ್ತು ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಆರು ಹಳ್ಳಿಗಳಲ್ಲಿ ಮಂಗಳವಾರ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಶಾಸಕ ಎಂ.ರಾಜಣ್ಣ ನೆರವೇರಿಸಿದರು.
ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಪರಿಶಿಷ್ಠ ಜಾತಿಯವರ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು ಆರೂವರೆ ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ, ತಾತಹಳ್ಳಿ ಗ್ರಾಮದಲ್ಲಿ ತಲಾ ಆರು ಲಕ್ಷ ರೂಪಾಯಿಗಳ ಎರಡು ಕಾಮಗಾರಿಗಳು, ಚಾಗೆ ಗ್ರಾಮದಲ್ಲಿ ಆರೂ ಕಾಲು ಲಕ್ಷ ರುಪಾಯಿಗಳ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ, ಶೆಟ್ಟಹಳ್ಳಿಯಲ್ಲಿ ತಲಾ ಐದು ಲಕ್ಷ ರೂಗಳ ಎರಡು ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
‘ಶೆಟ್ಟಹಳ್ಳಿ ಮತ್ತು ಮಲ್ಲಹಳ್ಳಿ ರಸ್ತೆಯು ಸುಮಾರು ಹದಿನೈದು ವರ್ಷಗಳಿಂದ ಹದಗೆಟ್ಟು ಈ ಭಾಗದ ಜನರು ಈ ಬಗ್ಗೆ ದೂರುತ್ತಿದ್ದರು. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸುಮಾರು 60 ಲಕ್ಷ, ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಒಂದು ಕೋಟಿಗೂ ಹೆಚ್ಚಿನ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತುನೀಡಬೇಕು’ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಅಬ್ಲೂಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕನಕಪ್ರಸಾದ್, ಮುನಿವೆಂಕಟಸ್ವಾಮಪ್ಪ, ಎ.ಶ್ರೀರಾಮಪ್ಪ, ಕವಿತಾ ಮಂಜುನಾಥ, ನಾರಾಯಣಸ್ವಾಮಿ, ಸೂರ್ಯನಾರಾಯಣಗೌಡ, ರಮೇಶ್, ಚನ್ನರಾಯಪ್ಪ, ರಾಜಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.