ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮವನ್ನು ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ವಿಜೃಂಭಣೆಯಿಂದ ಶುಕ್ರವಾರ ಆಚರಿಸಲಾಯಿತು.
ತಾಲ್ಲೂಕು ಒಕ್ಕಲಿಗರ ಯುವಸೇನೆ ಮತ್ತು ಅಬ್ಲೂಡು ಗ್ರಾಮ ಪಂಚಾಯತಿ ಒಕ್ಕಲಿಗರ ಯುವಸೇನೆ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಿಡ್ಲಘಟ್ಟದ ಬಸ್ ನಿಲ್ದಾಣದಿಂದ ಅಬ್ಲೂಡು ವೇದಿಕೆಯವರೆಗೆ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ವಿಶೇಷವಾಗಿ ಹೂಗಳಿಂದ ಅಲಂಕೃತಗೊಂಡ ಪಲ್ಲಕ್ಕಿಯಿರುವ ವಾಹನದಲ್ಲಿ ನಿರ್ಮಲಾನಂದ ಮಹಾಸ್ವಾಮಿಗಳ ಮೆರವಣಿಗೆಯನ್ನು ನಡೆಸಲಾಯಿತು. ಡೊಳ್ಳು, ಕಂಸಾಲೆ, ಗಾರುಡಿ ಬೊಂಬೆ, ವೇಷಭೂಷಣಗಳೊಂದಿಗೆ ವಿವಿಧ ಕಲಾ ತಂಡಗಳು, ವಾದ್ಯ ವೃಂದಗಳು ಮೆರವಣಿಗೆಯ ಕಳೆಯನ್ನು ಹೆಚ್ಚಿಸಿದ್ದವು. ಒಕ್ಕಲಿಗರ ಯುವಸೇನೆ ವತಿಯಿಂದ ಬೈಕ್ ರ್ಯಾಲಿಯನ್ನು ಆಯೋಜಿಸಿದ್ದು ನೂರಾರು ಬೈಕುಗಳಲ್ಲಿ ಯುವಕರು ಕೆಂಪೇಗೌಡನ ಚಿತ್ರವುಳ್ಳ ಧ್ವಜವನ್ನು ಹಿಡಿದು ಮೆರವಣಿಯ ಮುಂದೆ ಸಾಗಿದರು. ವಿವಿಧ ಗ್ರಾಮಗಳಿಂದ ಟ್ರಾಕ್ಟರ್ಗಳನ್ನು ಅಲಂಕರಿಸಿಕೊಂಡು ಸ್ವಾಮೀಜಿ ಹಾಗೂ ಕೆಂಪೇಗೌಡ ಚಿತ್ರಗಳೊಂದಿಗೆ ಆಗಮಿಸಿದ್ದರು.
ಕೋಟೆ ವೃತ್ತದ ಮದೀನಾ ಮಸೀದಿಯ ಬಳಿ ಮೆರವಣಿಗೆ ಆಗಮಿಸುತ್ತಿದ್ದಂತೆಯೇ ಮಸೀದಿಯ ವತಿಯಿಂದ ಮುಸ್ಲೀಮರು ನಿರ್ಮಲಾನಂದ ಸ್ವಾಮಿಗಳಿಗೆ ಗಂಧ ಪುಷ್ಪಗಳನ್ನು ನೀಡಿ ಆಶೀರ್ವಾದ ಪಡೆದರು.
ಅಬ್ಲೂಡು ಗ್ರಾಮದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ನಿರ್ಮಲಾನಂದ ಸ್ವಾಮಿಗಳು, ‘ಈ ಭಾಗದ ಜಿಲ್ಲೆಗಳಿಗೆ ಶಾಶ್ವತವಾದ ನೀರು ತರಲು ರಾಜಕೀಯವನ್ನು ಬದಿಗಿಟ್ಟು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಶ್ರಮಿಸಬೇಕು. ಅಗತ್ಯಬಿದ್ದಲ್ಲಿ ಜನರೆಲ್ಲಾ ಒಗ್ಗೂಡಿ ನೀರಿಗಾಗಿ ಹೋರಾಟ ನಡೆಸಲು ಮುಂದಾಗಬೇಕು. ಒಕ್ಕಲುತನವು ಅನ್ನವನ್ನು ಉತ್ಪಾದಿಸುವ ಉತೃಷ್ಟ ಕೆಲಸ. ವ್ಯವಸಾಯವನ್ನು ಬಿಡದೆ, ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಆದಿಚುಂಚನಗಿರಿ ಮಠವು ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಸಮುದಾಯದವರೂ ಮಠದ ಸೇವಾ ಕಾರ್ಯಗಳಾದ ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಹೇಳಿದರು.
ಗುಡಿಯಪ್ಪ, ಆನೂರು ಜಿ.ಬಚ್ಚಪ್ಪ, ತಿಪ್ಪೇನಹಳ್ಳಿ ರಾಘವೇಂದ್ರ, ಭಕ್ತರಹಳ್ಳಿ ಬೈರೇಗೌಡ, ವೆಂಕಟರಾಮರೆಡ್ಡಿ, ಮಳ್ಳೂರು ಹರೀಶ್, ಜಗನ್ನಾಥ್ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು. ಹೆಚ್ಚು ಅಂಕ ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ನಿರ್ಮಲಾನಂದ ಸ್ವಾಮಿಗಳಿಗೆ ಬೆಳ್ಳಿ ಕಿರೀಟವನ್ನಿಟ್ಟು, ಫಲಪುಷ್ಪಗಳನ್ನು ನೀಡಿ ಗುರುವಂದನೆಯನ್ನು ಸಲ್ಲಿಸಲಾಯಿತು.
ಶಾಸಕರಾದ ಎಂ.ರಾಜಣ್ಣ, ಡಾ.ಸುಧಾಕರ್, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಾಥನಂದ ಸ್ವಾಮೀಜಿ, ಪ್ರೊ.ಶಿವರಾಮರೆಡ್ಡಿ, ಡಾ.ರಮೇಶ್, ಸತೀಶ್, ರಾಮಚಂದ್ರ, ಪ್ರತಾಪ್, ಎಸ್.ಎಂ.ನಾರಾಯಣಸ್ವಾಮಿ, ಗೋಪಾಲ್, ಬೈರೇಗೌಡ, ಆಂಜನೇಯರೆಡ್ಡಿ, ಮುನಿಕೃಷ್ಣಪ್ಪ, ಮುನೇಗೌಡ, ಆರ್.ಎ.ಉಮೇಶ್, ಸುರೇಂದ್ರಗೌಡ, ಅಜಿತ್, ಬಿ.ನಾರಾಯಣಸ್ವಾಮಿ, ಜೆ.ಎಸ್.ವೆಂಕಟಸ್ವಾಮಿ, ಪುರುಷೋತ್ತಮ್, ಪ್ರಾಂಶುಪಾಲ ಮಹದೇವಯ್ಯ, ಚಿಕ್ಕೇಗೌಡ, ಮಂಜುನಾಥ್, ಸುಧಾಕರ್, ಆಂಜನೇಯರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -