‘ಹೆಣ್ಣು ಮಕ್ಕಳನ್ನು ಪ್ರತಿಯೊಂದು ವಿಷಯದಲ್ಲೂ ಬೈತಾ ಇರ್ತಾರೆ. ಏಕೆ ಹೆಣ್ಣು ಮಕ್ಕಳೆಂದರೆ ಅಷ್ಟೊಂದು ಕೀಳಾ? ಗಂಡುಮಕ್ಕಳು ದಿನವೆಲ್ಲಾ ಅಪಾಪೋಲಿ ಬಿದ್ದುಕೊಂಡು ಬಂದ್ರೂ ಏನೂ ಬಯ್ಯಲ್ಲ, ನಾವೇನಾದ್ರೂ ಒಬ್ಬರ್ ಮನೆ ಹತ್ರ ಹೋದ್ರೆ, ಏನಕ್ಕೋಗಿದ್ದೆ? ಎಲ್ಲಿಗೋಗಿದ್ದೆ? ಯಾಕೋಗಿದ್ದೆ? ಅನ್ನೋದೆಲ್ಲಾ ಹೇಳಬೇಕು. ಏಕೆ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯಾನೇ ಇಲ್ವಾ?…’ ಹೀಗೆ ಸಾಗುವ ಬರಹ ಹೆಣ್ಣುಮಕ್ಕಳ ಸಂವೇದನೆ, ನೋವು, ದುಗುಡ, ದುಃಖ, ಆಕಾಂಕ್ಷೆ, ಬೇಸರ, ಕೋಪ ತಾಪಗಳನ್ನು ಪ್ರತಿಧ್ವನಿಸುತ್ತದೆ.
ಈ ಬರಹವನ್ನು ನೋಡಿ ಇದನ್ನು ಬರೆದದ್ದು ಮಹಿಳಾ ಸಂಘಟನೆಯ ಮುಖಂಡರೋ, ಸ್ತ್ರೀ ಪರ ಹೋರಾಟಗಾರರೋ ಅಂದುಕೊಂಡರೆ ತಪ್ಪು. ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೃತ ಬರೆದಿರುವ ಬರಹವು ಹೆಣ್ಣಿನ ಮನಸ್ಸಿನ ಆಲೋಚನೆಗಳನ್ನು ಸಶಕ್ತವಾಗಿ ಪ್ರತಿಬಿಂಬಿಸುತ್ತದೆ. ‘ಅಮೃತ’ ಬರೆದ ಕಥೆ, ಕವನ, ನಾಟಕ, ಲೇಖನಗಳನ್ನು ಪರಿಗಣಿಸಿ ರಾಜ್ಯ ಮಟ್ಟದ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಕ್ಕೆ ಆಯ್ಕೆ ಮಾಡಲಾಗಿದೆ.
ಕಳೆದ 15 ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆ, ಶಹಾಪುರ- ಅವರು ಎಳವೆಯಲ್ಲೆ ಕಣ್ಮರೆಯಾದ ಬಾಲ-ಕವಿ ವಿದ್ಯಾಸಾಗರ ಕುಕ್ಕುಂದಾ ಅವರ ನೆನಪಿನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ನೀಡುತ್ತ ಬರುತ್ತಿರುವ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಈ ಬಾರಿ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕೆ.ಎನ್.ಅಮೃತ ಅವರಿಗೆ ದೊರಕಿದೆ. ರಾಜ್ಯದಾದ್ಯಂತ ಕ್ರಿಯಾಶೀಲ ಯುವ ಮನಸ್ಸುಗಳ ಬರಹಗಳಲ್ಲಿ ಕೆ.ಎನ್.ಅಮೃತ ಅವರ ಬರಹಗಳಿಗೆ ಮೊದಲ ಸ್ಥಾನ ನೀಡಿರುವುದಾಗಿ ತೀರ್ಪುಗಾರರಾಗಿದ್ದ ಡಾ. ಸುರೇಶ್ ನಾಗಲಮಡಿಕೆ ತಿಳಿಸಿದ್ದಾರೆ.
ಕನ್ನಮಂಗಲ ಗ್ರಾಮದ ಕೆ.ಎನ್.ಅಮೃತ ಪ್ರಾಥಮಿಕ ಶಿಕ್ಷಣವನ್ನು ಪಡೆದದ್ದು ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಂತರ ಈಗ ಓದುತ್ತಿರುವುದು ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ. ‘ಹೀಗಾದರೆ ಟೆಂತ್ ಫೇಲಾಗುವುದು ಗ್ಯಾರಂಟಿ’, ‘ಅಪ್ಪಾ ನಿನಗೇನೂ ಆಸೇನೇ ಇಲ್ವಾ?’, ‘ಪರಿಸರ ಮಾಲಿನ್ಯ’, ‘ನನ್ನಜ್ಜಿ’, ‘ನನ್ನ ಬ್ಯಾಗು’, ‘ನೆಮ್ಮದಿಯೇ ಇಲ್ಲ ನನ್ನಮ್ಮನಿಗೆ’, ‘ಒಗಟು’, ‘ಹಂದಿಗಳು’, ‘ತಾರೆಗಳು’, ‘ನನ್ನ ನೋವು ಹೇಗಿತ್ತು’, ‘ನನ್ನ ಸಂತಸ ಹೇಗಿತ್ತು’ ಮುಂತಾದ ಕಥೆಗಳು, ‘ನಾನೂ ಇದನ್ನು ನಂಬ್ತೀನಾ?’, ‘ನನ್ನಲ್ಲಿನ ಅನುಮಾನ’, ‘ನಮ್ಮಂತಹವರು ಈ ಪ್ರಪಂಚದಲ್ಲಿ ಎಷ್ಟು ಜನರೋ’, ‘ನನ್ನೊಳಗಿನ ಭಯ’, ‘ಇವರೆಲ್ಲ ಅಜ್ಜಿಗಳಾ?’, ‘ಹಳ್ಳಿಯ ಸ್ಪೆಶಲ್ ಗೊಡ್ಡುಖಾರ’, ‘ಹೆಣ್ಣು ಗಂಡು ಬೇಧ ಭಾವ ಏಕೆ?’, ‘ಆತುರ್ಗಾರಳು ನಮ್ಮಕ್ಕ’ ಮುಂತಾದ ಕವನಗಳು ಹಾಗೂ ಗ್ರಾಮದಲ್ಲಿ ತೆಲುಗು ನಾಟಕವನ್ನು ನೋಡಿ ಬಂದು ಬರೆದ ಕನ್ನಡದ ನಾಟಕ ‘ಸಾಸುಲ ಚಿನ್ನಮ್ಮ’ ಈಕೆಯ ಬರವಣಿಗೆಯ ವೈವಿಧ್ಯತೆಯನ್ನು ತೋರುತ್ತದೆ.
‘ಕನ್ನಮಂಗಲ ಶಾಲೆಯಲ್ಲಿನ ಸಾಹಿತ್ಯಿಕ ವಾತಾವರಣ ‘ನಾನೂ ಬರೆಯಬಲ್ಲೆ’ ಎಂಬ ಆತ್ಮವಿಶ್ವಾಸ ಮೂಡಿಸಿತು. ಕನ್ನಮಂಗಲದ ಸ್ನೇಹ ಪ್ರಕಾಶನದ ವಸಂತಕುಮಾರ್ ನೇತೃತ್ವದಲ್ಲಿ ಪ್ರತೀ ವರ್ಷ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಬರೆದ ಬರವಣಿಗೆಗಳ ಸಂಕಲನ ‘ಶಾಮಂತಿ’ ಹೊರತರುವುದರಿಂದಾಗಿ ಹಲವಾರು ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ. ಅದರಲ್ಲಿ ನನ್ನ ಬರಹಗಳು ಪ್ರಕಟವಾದಾಗ ಖುಷಿಯಾಯಿತು. ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಕೈಗೊಂಡ ನನಗೆ ಅಲ್ಲಿಯೂ ಶಿಕ್ಷಕರ ಪ್ರೋತ್ಸಾಹ ಲಭಿಸಿತು. ಹೀಗಾಗಿ ನನ್ನ ಅನಿಸಿಕೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸಲು ಸಾಧ್ಯವಾಯಿತು’ ಎಂದು ಕೆ.ಎನ್.ಅಮೃತ ತಿಳಿಸಿದರು.
‘ನಮ್ಮ ಗ್ರಾಮದ ಹೆಣ್ಣು ಮಗುವೊಂದು ರಾಜ್ಯಮಟ್ಟದ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆ ತಂದಿದೆ. ಈ ಪ್ರಶಸ್ತಿಯು ಗ್ರಾಮೀಣ ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರೇರಣೆ ನೀಡಬಲ್ಲುದಾಗಿದೆ. ಮಕ್ಕಳಲ್ಲಿನ ಸುಪ್ತ ಬರಹಗಾರನನ್ನು ಬಡಿದೆಬ್ಬಿಸುವ, ಅವರ ಭಾವನೆಗೆ ಕ್ರಿಯಾತ್ಮಕ ರೂಪ ನೀಡುವ ಸಲುವಾಗಿ ನಾವು ಪ್ರತೀ ವರ್ಷ ಶಾಮಂತಿ ಎಂಬ ಮಕ್ಕಳ ಬರಹಗಳ ಪುಸ್ತಕವನ್ನು ಹೊರತರುತ್ತೇವೆ. ಶಾಮಂತಿಯ ಕೂಸಾದ ‘ಅಮೃತ’ ಳಿಗೆ ಈ ವರ್ಷದ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಸಂದಿರುವುದು ನಮ್ಮ ಸ್ನೇಹ ಪ್ರಕಾಶನದ ವೃಂದಕ್ಕೂ ಪ್ರೋತ್ಸಾಹ ನೀಡಿದಂತಿದೆ’ ಎನ್ನುತ್ತಾರೆ ಕನ್ನಮಂಗಲದ ಸ್ನೇಹ ಪ್ರಕಾಶನದ ವಸಂತಕುಮಾರ್.
–ಡಿ.ಜಿ.ಮಲ್ಲಿಕಾರ್ಜುನ
- Advertisement -
- Advertisement -
- Advertisement -
- Advertisement -