ಶಾಲಾ ಆವರಣದಲ್ಲಿ ಗಿಡ ನೆಡಿ, ಗ್ರಾಮದ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಿ, ಮನೆಗಳಲ್ಲಿನ ಶೌಚಾಲಯದ ಅಗತ್ಯತೆಯ ಅರಿವು ಮೂಡಿಸಿ ಎಂದು ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿನ ನ್ಯೂನತೆಗಳನ್ನು ತಿಳಿಸುತ್ತಾ ಗ್ರಾಮ ಪಂಚಾಯಿತಿಯಿಂದ ಆಗಬಹುದಾದ ಕೆಲಸಗಳ ಬಗ್ಗೆ ಕೋರಿಕೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಅಪ್ಪೇಗೊಂಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈಚೆಗೆ ಹಂಡಿಗನಾಳ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳ ಬಗ್ಗೆ ಬೆಳಕನ್ನು ಚೆಲ್ಲಿದರು.
ಶುದ್ಧ ಕುಡಿಯುವ ನೀರು ನಮಗೆ ಬೇಕು. ಅದರಿಂದ ಹಲವು ರೋಗಗಳು ತಪ್ಪುತ್ತವೆ. ಗ್ರಾಮಕ್ಕೆ ಒಂದು ಗ್ರಂಥಾಲಯ ಬೇಕಿದೆ ಮುಂತಾದ ಬೇಡಿಕೆಗಳನ್ನು ಮಕ್ಕಳು ಮುಂದಿಟ್ಟರು.
ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಜಿಲ್ಲಾ ರಕ್ಷಣಾಧಿಕಾರಿ ಗೋಪಾಲರೆಡ್ಡಿ ಮಾತನಾಡಿ, ಮಕ್ಕಳು ದೇವರ ಸಮಾನ. ಅವರ ಮನಸ್ಸಿನಲ್ಲಿ ಕಲ್ಮಶವಿರುವುದಿಲ್ಲ. ಅವರು ಅಗತ್ಯತೆಗಳ ಅನುಗುಣವಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ಅವನ್ನು ಈಡೇರಿಸಲು, ಸ್ಪಂದಿಸಲು ಗ್ರಾಮ ಪಂಚಾಯಿತಿಯವರು ಮನಸ್ಸು ಮಾಡಬೇಕು. ಗ್ರಾಮೀಣ ಮಕ್ಕಳು ಅಪಾರ ಪ್ರತಿಭಾವಂತರು. ಅವರ ಪ್ರತಿಭೆಯನ್ನು ಪೊರೆಯಲು ಪೂರಕವಾದ ವಾತಾವರಣ ಕಲ್ಪಿಸಬೇಕಾದದ್ದು ಹಿರಿಯರ ಕರ್ತವ್ಯವಾಗಿದೆ. ಪೋಷಕರು ಮಕ್ಕಳ ಬಗ್ಗೆ ಗಮನಹರಿಸುತ್ತಿರಬೇಕು. ಅವರ ಬೆಳವಣಿಗೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿ ಕುಮಾರಸ್ವಾಮಿ ಶಾಲಾ ಮಕ್ಕಳಿಗೆ ಮಕ್ಕಳ ಹಕ್ಕುಗಳ ಬಗ್ಗೆ, ಸ್ವಚ್ಛತೆಯ ಕುರಿತು ಹಾಗೂ ಮಕ್ಕಳಿಗೆ ಇಲಾಖೆಯ ಯೋಜನೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಶಾಲಾ ಮಕ್ಕಳು ವೇಷಭೂಷಣ ಧರಿಸಿ ನಾಟಕ, ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸಿಡಿಪಿಓ ಇಲಾಖೆಯ ಅಧಿಕಾರಿ ರಾಧಮ್ಮ, ಹಂಡಿಗನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜು, ಬೈರಾರೆಡ್ಡಿ, ಉಮಾ, ನೇತ್ರಾವತಿ, ಪಿಡಿಓ ಬಿ.ಇ.ಅಂಜನ್‌ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ವೆಂಕಟೇಶ್, ನರಸಿಂಹಮೂರ್ತಿ, ಲಕ್ಷ್ಮೀಪತಿ, ಜಗದೀಶ್, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಮುಖ್ಯ ಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್, ಭಾರತಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -