ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಆಧಾರದ ಮೇಲೆ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು ವಸ್ತುಸ್ಥಿತಿಯ ಅಧ್ಯಯನ ಮಾಡಿ ಅಂಕಿ ಅಂಶಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಾಧ್ಯಂತ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಇರುವುದರಿಂದ ಕೆಲವು ಕಡೆ ಬಿತ್ತನೆ ಕಾರ್ಯ ಆಗಿದೆ ಇನ್ನು ಕೆಲವೆಡೆ ಬಿತ್ತನೆ ಕಾರ್ಯವಾಗಿಲ್ಲ. ಹಾಗಾಗಿ ರೈತರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಹದಿನೈದು ದಿನಗಳಿಗೊಮ್ಮೆ ಕ್ಷೇತ್ರದಲ್ಲಿ ಸಂಚಾರ ನಡೆಸಿ, ವಸ್ತುಸ್ಥಿತಿಯ ಬಗ್ಗೆ ಅಂಕಿ ಅಂಶಗಳನ್ನು ನೀಡಬೇಕು, ಇಲಾಖೆಯ ಮುಖಾಂತರ ರೈತರಿಗೆ ಸಿಗುವಂತಹ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು, ರೈತರಿಗೆ ವಿತರಣೆಯಾಗುತ್ತಿರುವ ರಸಗೊಬ್ಬರಗಳು ಹಾಗೂ ವಿವಿಧ ಸೌಲಭ್ಯಗಳು ದುರುಪಯೋಗವಾಗುತ್ತಿರುವುದರ ಬಗ್ಗೆ ದೂರುಗಳು ಬರುತ್ತಿದ್ದು ಅವಶ್ಯವಿರುವ ರೈತರಿಗೆ ಮಾತ್ರ ಸೌಲಭ್ಯಗಳನ್ನು ಒದಗಿಸುವಂತೆ ಹೇಳಿದರು.
ತೋಟಗಾರಿಕೆ ಇಲಾಖೆಯಲ್ಲಿ ಈಗಾಗಲೇ ಬಹಳಷ್ಟು ಮಂದಿ ರೈತರು ಪೌಲ್ಟ್ರಿಹೌಸ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಈವರೆಗೂ ಸಹಾಯಧನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆ ಮಾಡಲು ಅಗತ್ಯವಾಗಿರುವ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಲಾಗುತ್ತದೆ ಎಂದರು.
ರೇಷ್ಮೆ ಇಲಾಖೆಯ ಮುಖಾಂತರ ಗೂಡು ಬೆಳೆಯುವಂತಹ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಮಿಶ್ರತಳಿಗೆ ೩೦ ರೂಪಾಯಿಗಳು, ದ್ವಿತಳಿ ಗೂಡಿಗೆ ೫೦ ರೂಪಾಯಿಗಳಂತೆ ನಿಗದಿ ಮಾಡಿರುವುದರಿಂದ ರೈತರು ನೇರವಾಗಿ ಬೆಳೆದ ಗೂಡನ್ನು ಮಾರುಕಟ್ಟೆಗೆ ತರುತ್ತಿದ್ದಾರೆ, ಇದರಿಂದ ಬಿಡುಗಡೆಯಾಗುತ್ತಿರುವ ಅನುದಾನಗಳ ಮೊತ್ತ ಕಡಿಮೆಯಾಗಿದ್ದು ಸಕಾಲದಲ್ಲಿ ರೈತರಿಗೆ ಹಣವನ್ನು ಹಂಚಿಕೆ ಮಾಡಲು ಕಷ್ಟಕರವಾಗಿದೆ ಎಂದು ಸಹಾಯಕ ನಿರ್ದೇಶಕ ಚಂದ್ರಪ್ಪ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಬಿ.ಸಿ.ಎಂ. ಇಲಾಖೆಯ ಅಧಿಕಾರಿಗಳು ವಿಧ್ಯಾರ್ಥಿನಿಲಯಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಬೇಕು, ಹೆಣ್ಣು ಮಕ್ಕಳ ವಿಧ್ಯಾರ್ಥಿನಿಲಯಗಳಲ್ಲಿ ಮಹಿಳಾ ವಾರ್ಡನ್‌ಗಳನ್ನು ನೇಮಕ ಮಾಡಬೇಕು, ಭದ್ರತೆಯನ್ನು ಒದಗಿಸಬೇಕು, ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡದ ಏಜೆಂಟರುಗಳ ಮೇಲೆ ಕ್ರಮಕ್ಕೆ ಮುಂದಾಗಬೇಕು, ಎಲ್ಲಾ ವಿಧ್ಯಾರ್ಥಿನಿಲಯಗಳಲ್ಲಿ ಖಡ್ಡಾಯವಾಗಿ ಬಿಸಿನೀರು ದೊರೆಯುವಂತೆ ನೋಡಿಕೊಳ್ಳಬೇಕು, ಎಲ್ಲಾ ನಿಲಯಗಳಲ್ಲಿ ಯು.ಪಿ.ಎಸ್.ಗಳನ್ನು ಅಳವಡಿಸಬೇಕು ಎಂದು ಇಲಾಖೆಯ ಅಧಿಕಾರಿ ಪುರುಷೋತ್ತಮ್ ಹಾಗೂ ವಾರ್ಡನ್ ಲಕ್ಷ್ಮೀದೇವಮ್ಮ ಅವರಿಗೆ ಸೂಚಿಸಿದರು.
ಕುಡಿಯುವ ನೀರಿಗಾಗಿ ಕೊರೆಯಿಸಿರುವ ಕೊಳವೆಬಾವಿಗಳಿಗೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಸಹಕಾರವನ್ನು ಪಡೆದುಕೊಂಡು ತುರ್ತಾಗಿ ವಿದ್ಯು ತ್ ಸಂಪರ್ಕವನ್ನು ಕಲ್ಪಿಸುವಂತೆ ಬೆಸ್ಕಾಂ ಇಲಾಖೆಯ ಎಇಇ ಬೈರೇಗೌಡ ಅವರಿಗೆ ಸೂಚಿಸಿದರು.
ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಕೈಗಾರಿಕಾ ಇಲಾಖೆ, ಪಶುವೈದ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಲಾನಯನ ಇಲಾಖೆ ಸೇರಿದಂತೆ ಉಳಿದ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಲ್ಲೂಕು ಪಂಚಾಯತಿ್ತಿ ಅಧ್ಯಕ್ಷೆ ಆಂಜಿನಮ್ಮ, ಜಿ.ಪಂ.ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಶಿವಲೀಲಾರಾಜಣ್ಣ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ ಮತ್ತಿತರರು ಹಾಜರಿದ್ದರು.
ಅಧಿಕಾರಿಗಳು ವಸ್ತುಸ್ಥಿತಿಯ ಅಧ್ಯಯನ ಮಾಡಿ ಅಂಕಿ ಅಂಶಗಳನ್ನು ನೀಡಬೇಕು – ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ
- Advertisement -
- Advertisement -
- Advertisement -
- Advertisement -