ಗ್ರಾಮೀಣ ಪ್ರದೇಶಗಳು ಸರ್ವಾಂಗೀಣ ಅಭಿವೃದ್ಧಿ ಕಾಣಬೇಕಾದರೆ, ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯತಿಯ ಜೆ.ವೆಂಕಟಾಪುರದಲ್ಲಿ ಗುರುವಾರ ೧೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಂಬೇಡ್ಕರ್ಭವನ, ಬಳುವನಹಳ್ಳಿ ಗ್ರಾಮದಲ್ಲಿ ೪.೯೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿ.ಸಿ.ರಸ್ತೆ ಹಾಗೂ ನರೇಗಾ ಯೋಜನೆಯಲ್ಲಿ ನರೇಗಾ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಂದು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿದೀಪಗಳನ್ನು ಒದಗಿಸುವಂತಹ ಕಾರ್ಯವನ್ನು ಮಾಡಲು ಸರ್ಕಾರ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು, ಈ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು, ಗ್ರಾಮ ಪಂಚಾಯತಿಗಳ ಮುಖಾಂತರ ಶೌಚಾಲಯಗಳ ನಿರ್ಮಾಣಕ್ಕೆ ಪರಿಶಿಷ್ಠಜಾತಿ, ಪರಿಶಿಷ್ಠ್ಟವರ್ಗದ ಜನರಿಗೆ ೧೫ ಸಾವಿರ, ಇತರೆ ಜನಾಂಗದವರಿಗೆ ೧೨ ಸಾವಿರ ರೂಪಾಯಿಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಬಳುವನಹಳ್ಳಿ ಗ್ರಾಮದಲ್ಲಿ ಇದುವರೆಗೂ ಸರ್ಕಾರಿ ಶಾಲೆಯಿಲ್ಲದೆ ದಾನಿಗಳು ನೀಡಿರುವ ಕಟ್ಟಡದಲ್ಲೆ ಮಕ್ಕಳ ಶಿಕ್ಷಣ ಮುಂದುವರೆಯುತ್ತಿದ್ದು, ಶೀಘ್ರವಾಗಿ ಭೂ ಮಾಪನ ಇಲಾಖೆಯ ಅಧಿಕಾರಿಗಳ ತಂಡವನ್ನು ಕಳುಹಿಸಿ, ಸರ್ವೆ ಮಾಡಿ ಪರಿಶಿಷ್ಠ ಜನಾಂಗದ ನಿವೇಶನ ರಹಿತರಿಗೆ ೫ ನಿವೇಶನಗಳನ್ನು ಮಂಜೂರು ಮಾಡಿ, ಸರ್ಕಾರಿ ಶಾಲೆಗೆ ಅಗತ್ಯವಾಗಿರುವ ಭೂಮಿಯನ್ನು ಮೀಸಲಿಟ್ಟು, ಶಾಸಕರ ಅನುದಾನದಲ್ಲಿ ಶಾಲೆಯ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಪಿ.ಎಂ.ಜಿ.ಎಸ್.ವೈ.ಯೋಜನೆಯಲ್ಲಿ ವೆಂಕಟಾಪುರದಿಂದ ಬಳುವನಹಳ್ಳಿಯವರೆಗೆ ರಸ್ತೆಯ ಡಾಂಬರೀಕರಣ ಮಾಡಲಾಗುತ್ತದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎನ್.ರಘುನಾಥ್, ಉಪಾಧ್ಯಕ್ಷ ಚಂದ್ರೇಗೌಡ, ಪಿ.ಡಿ.ಓ ಎಂ.ಕೆ.ಕಾತ್ಯಾಯಿನಿ, ಸದಸ್ಯರಾದ ಮೂರ್ತಿ, ವಿಜಯಕುಮಾರ್, ಶ್ರೀನಿವಾಸ್, ತಾದೂರು ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -