ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಖರೀದಿಸದೆ ಮಾರುಕಟ್ಟೆಯ ಹೊರಗೆ ರೀಲರುಗಳು ಧರಣಿ ಕುಳಿತಿರುವುದು ನಾಲ್ಕನೇ ದಿನವಾದ ಗುರುವಾರವೂ ಮುಂದುವರೆದಿದೆ.
ರೀಲರ್ ಮುಖಂಡ ಜಿ.ರೆಹಮಾನ್ ಮಾತನಾಡಿ ಕಳೆದ ನಾಲ್ಕು ದಿನಗಳಿಂದ ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟಿಲ್ಲದೇ ಕೋಟ್ಯಾಂತರ ರೂಗಳ ವ್ಯವಹಾರ ನಿಂತಿದ್ದರೂ ಈವರೆಗೂ ರೀಲರ್ಗಳ ಮನವಿಗೆ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಅಧಿಕಾರಿಗಳ ಮತ್ತು ಸರ್ಕಾರದ ಕ್ರಮವನ್ನು ಖಂಡಿಸಿ ಶುಕ್ರವಾರ ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕರೂ ಸೇರಿದಂತೆ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರ ಅಣಕು ಶವಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ನಂತರವೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಲಿಲ್ಲವಾದರೆ ರೇಷ್ಮೆ ಇಲಾಖೆಯ ಆಯುಕ್ತರೂ ಸೇರಿದಂತೆ ಮುಖ್ಯಮಂತ್ರಿಗಳ ಅಣಕು ಶವಯಾತ್ರ ಮಾಡಲಾಗುವುದು ಹಾಗೂ ಇದರ ಜೊತೆಗೆ ಈಗಾಗಲೇ ರಾಜ್ಯದ ಎಲ್ಲಾ ರೇಷ್ಮೆ ಗೂಡು ಮಾರುಕಟ್ಟೆಯ ರೀಲರ್ಗಳಿಗೂ ಪತ್ರ ರವಾನಿಸಿದ್ದು ನೆರೆಯ ತಾಲೂಕಿನ ರೀಲರ್ಗಳ ಸಹಾಯದಿಂದ ವಿಜಯಪುರ, ಎಚ್.ಕ್ರಾಸ್, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯ ರೇಷ್ಮೆ ಗೂಡು ಮಾರುಕಟ್ಟೆಯನ್ನು ಬಂದ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಮನಗರ ಮತ್ತು ಕೊಳ್ಳೇಗಾಲದಲ್ಲೂ ರೀಲರುಗಳು ಸಹ ಇ-–ಹರಾಜು ಪದ್ಧತಿಯನ್ನು ನಿಲ್ಲಿಸಬೇಕೆಂದು ಕೂಗು ಪ್ರಾರಂಭಿಸಿದ್ದು ಅವರೂ ನಮ್ಮಂತೆಯೇ ಇದನ್ನು ವಿರೋಧಿಸಿ ಮುಷ್ಕರ ಹೂಡಲಿದ್ದಾರೆ ಎಂದರು.
ಕೂಡಲೇ ಸರ್ಕಾರ ಮದ್ಯ ಪ್ರವೇಶಿಸಿ ರೀಲರ್ಗಳಿಗೆ ಅನ್ಯಾಯವಾಗುತ್ತಿರುವ ಇ-–ಹರಾಜು ಪದ್ಧತಿ ಸ್ಥಗಿತಗೊಳಿಸಲು ಮುಂದಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಅನಾಹುತಗಳಿಗೆ ಅಧಿಕಾರಿಗಳು ಮತ್ತು ಸರ್ಕಾರವೇ ನೇರ ಕಾರಣವಾಗುತ್ತಾರೆ ಎಂದರು.
ರೀಲರುಗಳಾದ ಜಿ.ರೆಹಮಾನ್, ಸಮೀವುಲ್ಲಾ, ಅಕ್ಮಲ್ಪಾಷ, ಎ.ಆರ್.ಅಬ್ದುಲ್ ಅಜೀಜ್, ಮಂಜು, ರಾಮಕೃಷ್ಣ, ರಮೇಶ್, ಗಣೇಶ್, ರವಿ, ಯೂಸುಫ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
- Advertisement -
- Advertisement -
- Advertisement -
- Advertisement -