ಅದ್ದೂರಿತನಕ್ಕಿಂತ ಜನಮೆಚ್ಚುವ ರೀತಿಯಲ್ಲಿ ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ತಾಲ್ಲೂಕು ಸಮ್ಮೇಳನವನ್ನು ನಡೆಸಲು ಉದ್ದೇಶಿಸಿದ್ದು, ಎಲ್ಲಾ ಹೋಬಳಿ ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕಸಾಪ ಜಂಗಮಕೋಟೆ ಹೋಬಳಿ ಅಧ್ಯಕ್ಷ ಆರ್.ಎ.ಉಮೇಶ್ ಮನವಿ ಮಾಡಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಈಚೆಗೆ ಜಂಗಮಕೋಟೆ ಹೋಬಳಿ ಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ಸಮಸ್ಯೆಗಳು, ಶಾಲಾ ವಿದ್ಯಾರ್ಥಿಗಳಿಗೋಸ್ಕರ ವಿದ್ಯಾರ್ಥಿಗಳಿಂದ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಎಂದೂ ಗುರುತಿಸದಂಥಹವರನ್ನು ಹುಡುಕಿ ಗುರುತಿಸುವುದು, ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಮಹಿಳೆಯರನ್ನು ಒಳಗೊಂಡ ಸಾಹಿತ್ಯ ಸಮ್ಮೇಳನ ನಡೆಯಲಿ ಎಂದು ಸಲಹೆ ನೀಡಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಕಸಾಪ ತಾಲ್ಲೂಕು ಸಮ್ಮೇಳನದ ದಿನಾಂಕವು ಮಾರ್ಚ್ 10ರ ಶುಕ್ರವಾರ ನಿಗದಿಯಾಗಲಿದ್ದು, ಶಿಡ್ಲಘಟ್ಟದ ವಾಸವಿ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ಧ್ವಜಾರೋಹಣ, ತಾಯಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ವಿದ್ಯಾರ್ಥಿ ಕವಿಗೋಷ್ಠಿ, ನನ್ನ ಮೆಚ್ಚಿನ ಪುಸ್ತಕ, ವಿಚಾರ ಗೋಷ್ಠಿ, ಸಾಧಕರಿಗೆ ಸನ್ಮಾನ ಸಮಾರಂಭ, ಸಮಾರೋಪ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕಿನ ಎಲ್ಲಾ ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
ಸಮ್ಮೇಳನ ನಡೆಯುವ ಬಗ್ಗೆ, ಕಾರ್ಯಕ್ರಮ ಯಶಸ್ವಿ ಮಾಡಲು ಎಲ್ಲರ ಸಲಹೆ ಪಡೆಯಲಾಯಿತು, ಸಮಿತಿಗಳ ರಚನೆ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಲು ಸಭೆಯಲ್ಲಿ ಎಲ್ಲರ ಸಹಕಾರ ಕೋರಲಾಯಿತು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಉಪಾಧ್ಯಕ್ಷ ಚೌಡಸಂದ್ರ ಪಿ.ಈ. ಕರಗಪ್ಪ, ಸತೀಶ್, ಡಾ.ರಾಜ್‌ಕುಮಾರ್ ಸಂಘದ ಅಧ್ಯಕ್ಷ ಎಸ್,ಧರ್ಮೇಂದ್ರ, ಸುದರ್ಶನ್, ರಾಘವೇಂದ್ರ, ಸುದೀರ್, ಮುನಿಶಾಮಗೌಡ, ಲಕ್ಷ್ಮೀ ನಾರಾಯಣ (ಲಚ್ಚಿ ), ಮುಖ್ಯ ಶಿಕ್ಷಕಿ ಮಂಗಳ ಗೌರಮ್ಮ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -