ಗ್ರಾಮೀಣ ಮಟ್ಟದಲ್ಲಿ ಎಲ್ಲಾ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸಲು ಅಂಗನವಾಡಿ ನೌಕರರನ್ನು ಬಳಸಿಕೊಳ್ಳುತ್ತಾರೆ. ಆದರೆ, ಅವರಿಗೆ ಮಾತ್ರ ಸಮಾನ ವೇತನ ನೀಡದೆ ಸರ್ಕಾರ ಕಡೆಗಣಿಸಿದೆ ಎಂದು ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ಆರೋಪಿಸಿದರು.
ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದ ಅಂಗನವಾಡಿ ನೌಕರರ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಐ.ಸಿ.ಡಿ.ಎಸ್ ಯೋಜನೆಯನ್ನು ಬಲಪಡಿಸಬೇಕೆಂದು ಅನೇಕ ಬಾರಿ ಒತ್ತಾಯಿಸಿದ್ದರೂ ಸಹ ಆ ಯೋಜನೆಯನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಅಂಗನವಾಡಿ ನೌಕರರು ಜನಗಣತೆ, ದನಕರುಗಳಗಣತಿ, ಚುನಾವಣಾ ಕೆಲಸ, ಸ್ತ್ರೀಶಕ್ತಿ ಸಂಘ ಮುಂತಾದ ಹತ್ತು ಹಲವು ಸರ್ಕಾರಿ ಯೋಜನೆಗಳು ಹಾಗೂ ಮಾಹಿತಿ ಸಂಗ್ರಹಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಂಗನವಾಡಿ ಕೆಲಸವನ್ನು ಬಿಟ್ಟು ಬೇರೆ ಯಾವ ಕೆಲಸ ಕಾರ್ಯಗಳಲ್ಲಿ ಭಾಗಿಯಾಗದೆ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ದುರದೃಷ್ಟಕರ. ಎನ್.ಜಿ.ಒ ಗಳ ಮುಖಾಂತರ ಕಾರ್ಯಕರ್ತೆಯರಿಗೆ ಕಿರುಕುಳ ಕೊಡುವ ಮುಖಾಂತರ ಮಹಿಳೆಯರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಕನಿಷ್ಠ ವೇತನ 10 ಸಾವಿರ ರೂಗಳು ನಿಗದಿಪಡಿಸಬೇಕು. ಬೆಲೆ ಏರಿಕೆ ಆಗುತ್ತಿರುವ ಈ ಸಂದರ್ಭದಲ್ಲಿ ದಿನೇ ದಿನೇ ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಆದರೆ ವೇತನ ಮಾತ್ರ ಶ್ರಮಕ್ಕೆ ತಕ್ಕಂತೆ ನೀಡುತ್ತಿಲ್ಲ. ಯಾವುದೇ ಸೇವಾ ಭದ್ರತೆಯಿಲ್ಲದೆ ದುಡಿಯುತ್ತಿರುವ ನಮ್ಮನ್ನು ಸರ್ಕಾರ ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.
ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ವಿಸ್ಡಂ ನಾಗರಾಜ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಮಂಜುಳಾ, ಖಜಾಂಚಿ ಗುಲ್ಜಾರ್, ಉಪಾಧ್ಯಕ್ಷೆ ಭಾಗ್ಯಮ್ಮ, ಶಾಂತಮ್ಮ, ಅರುಣಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -