ಈ ವರ್ಷ ಎಂದಿಗಿಂತಲೂ ಕಡಿಮೆ ಪ್ರಮಾಣದ ಮಳೆ ಬಿದ್ದ ಕಾರಣ ತಾಲ್ಲೂಕಿನ ಯಾವುದೆ ಕರೆಯಲ್ಲೂ ನೀರಿಲ್ಲದಾಗಿದೆ. ಕೊಳವೆ ಬಾವಿಗಳಲ್ಲೂ ನೀರು ಬತ್ತಿದೆ. ಈ ಎಲ್ಲ ಪ್ರಾಕೃತಿಕ ಸಮಸ್ಯೆಯಿಂದ ಬೇಸಿಗೆ ದಿನಗಳು ಭಯಾನಕವಾಗಲಿವೆ.
ಕುಡಿಯುವ ನೀರಿನ ಯೋಜನೆಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನವೂ ಕಡಿಮೆ ಆಗಿದೆ. ೨೦೧೫-೧೬ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಕೈಗೊಂಡ ಕುಡಿಯುವ ನೀರಿನ ಯಾವುದೆ ಯೋಜನೆಗೂ ಮಂಜೂರಾತಿಯೂ ಸಿಗಲಿಲ್ಲ ಅನುದಾನವೂ ಬಿಡುಗಡೆಯಾಗಲಿಲ್ಲ. ಇದರಿಂದಾಗಿ ಆ ವರ್ಷದಲ್ಲಿ ಕೊರೆದ ಕೊಳವೆ ಬಾವಿಗಳ ಬಾಬ್ತು ಸುಮಾರು ೨.೫ ಕೋಟಿ ರೂ ಬಾಕಿ ಉಳಿಸಿಕೊಳ್ಳಲಾಗಿದೆ.
ಇದಲ್ಲದೆ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದ ಗ್ರಾಮಗಳಲ್ಲಿ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಿದ ಬಾಬ್ತು ಕಳೆದ ಎರಡು ವರ್ಷಗಳಿಂದಲೂ ಲಕ್ಷಗಟ್ಟಲೆ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ಸರ್ಕಾರಿ ಕೊಳವೆ ಬಾವಿಗಳನ್ನು ಕೊರೆಸಲು ಬೋರ್‌ವೆಲ್‌ನವರು ಹಿಂದೇಟು ಹಾಕಿದರೆ, ಕುಡಿಯುವ ನೀರು ಪೂರೈಸಲು ಟ್ಯಾಂಕರ್‌ದಾರರು ಮುಂದೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಇವೆಲ್ಲ ಕಾರಣಗಳಿಂದ ಈಗಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಬಿಗಡಾಯಿಸಿದೆ, ಬೇಸಿಗೆಗೂ ಮುನ್ನವೇ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು ಕೆಲವು ಗ್ರಾಮಗಳಲ್ಲಿ ಟ್ಯಾಂಕರ್ ನೀರನ್ನು ಪೂರೈಸಲಾಗುತ್ತಿದೆ.
ಈಗಿನ್ನೂ ಬೇಸಿಗೆ ಪ್ರಾರಂಭವಾಗಿದೆ. ತಾಲ್ಲೂಕಿನ ೧೪೪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಭವಿಷ್ಯದ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ಈಗಾಗಲೇ ಸಿದ್ದ ಮಾಡಿಟ್ಟುಕೊಂಡಿದೆ.
೧೪೪ ಗ್ರಾಮಗಳು ಅಂದರೆ ತಾಲ್ಲೂಕಿನ ಸರಿಸುಮಾರು ಅರ್ಧದಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲಿರುವುದು ಕಳೆದ ಎರಡು ಮೂರು ದಶಕಗಳಲ್ಲಿ ಇದೆ ಮೊದಲು. ಯಾವುದೆ ನದಿ ನಾಲೆಯಿಲ್ಲದ ಬಯಲು ಸೀಮೆಯ ಈ ಭಾಗದಲ್ಲಿ ಕೊಳವೆ ಬಾವಿಯೊಂದೆ ನೀರಿನ ಮೂಲಾಧಾರವಾಗಿದ್ದು ಕೊಳವೆ ಬಾವಿಗಳ ವಿಫಲತೆಯ ಪ್ರಮಾಣವು ದಿನ ದಿನಕ್ಕೂ ಹೆಚ್ಚುತ್ತಿದೆ. ಸರ್ಕಾರಿ ಅಥವಾ ಖಾಸಗಿ ಕೊಳವೆ ಬಾವಿಗಳ ವಿಫಲತೆಯ ಪ್ರಮಾಣ ಶೇ. ೫೦ಕ್ಕೆ ಮುಟ್ಟುತ್ತಿದೆ.
ಆತಂಕ ತರುವಷ್ಟರ ಮಟ್ಟಿಗೆ ಅಂತರ್ಜಲ ಮಟ್ಟ ಕುಸಿದ ತಾಲ್ಲೂಕಿಗೆ ಸರ್ಕಾರ ಎಲ್ಲಿಂದ ಯಾವ ಮೂಲದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸಲಿದೆ ಎಂಬ ಪ್ರಶ್ನೆ ಜನ ಸಾಮಾನ್ಯರನ್ನು ಕಾಡತೊಡಗಿದೆ.
ನಗರ ವ್ಯಾಪ್ತಿಯಲ್ಲಿ ನಗರಸಭೆ ಹಾಗೂ ಗ್ರಾಮೀಣ ಭಾಗದಲ್ಲಿ ಸಂಬಂಧಿಸಿದ ಇಲಾಖೆಯಿಂದ ಕೊಳವೆ ಬಾವಿಗಳನ್ನು ಕೊರೆಸಿ ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆಯಾದರೂ ಸಾಕಷ್ಟು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ತೀರಾ ಕುಸಿದಿದೆ. ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿವೆ. ಜತೆಗೆ ಹೊಸದಾಗಿ ಕೊರೆಯುತ್ತಿರುವ ಕೊಳವೆ ಬಾವಿಗಳಲ್ಲಿ ಶೇ. ೩೦ಕ್ಕೂ ಹೆಚ್ಚು ಕೊಳವೆ ಬಾವಿಗಳು ನೀರು ಸಿಗದೆ ವಿಫಲವಾಗುತ್ತಿದೆ. ಈ ಪ್ರಮಾಣ ದಿನ ಕಳೆದಂತೆ ಹೆಚ್ಚುತ್ತಿದ್ದು ಹತ್ತಿರ ಹತ್ತಿರ ಶೇ. ೫೦ಕ್ಕೆ ಮುಟ್ಟುತ್ತಿರುವುದು ಇಷ್ಟೆಲ್ಲಾ ಆತಂಕಕ್ಕೆ ಕಾರಣವಾಗುತ್ತಿದೆ.
ತಾಲ್ಲೂಕಿನ ವೈ.ಹುಣಸೇನಹಳ್ಳಿ, ಬಸವನಪರ್ತಿ, ಸೊಣ್ಣೇನಹಳ್ಳಿ ಸೇರಿದಂತೆ ಐದು ಗ್ರಾಮಗಳಲ್ಲಿ ಈಗಾಗಲೆ ಟ್ಯಾಂಕರ್ ನೀರು ಪೂರೈಸುತ್ತಿದ್ದು ನಾರಾಯಣದಾಸರಹಳ್ಳಿಯಲ್ಲಿ ಖಾಸಗಿ ಕೊಳವೆ ಬಾವಿಯಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ತಾಲ್ಲೂಕಿನ ವೀರಾಪುರ, ಅರಿಕೆರೆ, ಯಲಗಹಳ್ಳಿ, ಹನುಮಂತಪುರ, ಕೇಶವಪುರ, ಕಾಚಹಳ್ಳಿ, ಜಂಗಮಕೋಟೆ, ಯಣ್ಣಂಗೂರು, ದೇವಗಾನಹಳ್ಳಿ, ಕೊತ್ತನೂರು, ಎಚ್.ಕ್ರಾಸ್, ಮಳ್ಳೂರು, ಮುತ್ತೂರು, ಚೌಡಸಂದ್ರ, ನಾಗಮಂಗಲ, ಹುಜಗೂರು, ಚಿಂತಡಪಿ, ದೊಡ್ಡತೇಕಹಳ್ಳಿ, ದೊಡ್ಡದಾಸೇನಹಳ್ಳಿ, ರಾಗಿಮಾಕಲಹಳ್ಳಿ, ಹಕ್ಕಿ ಪಿಕ್ಕಿ ಕಾಲೋನಿ ಸೇರಿದಂತೆ ಒಟ್ಟು ೧೪೪ ಗ್ರಾಮಗಳಲ್ಲಿ ಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಲಿದೆ.
೨೦೧೫-–೧೬ನೇ ಸಾಲಿನಲ್ಲಿ ಕುಡಿಯುವ ನೀರಿನ ಯಾವುದೆ ಒಂದು ಯೋಜನೆಗೂ ಅನುಮತಿ ಸಿಗದ ಕಾರಣ ಆ ಹಣಕಾಸಿನ ವರ್ಷದಲ್ಲಿ ತಾಲ್ಲೂಕಿನಲ್ಲಿ ಕೊರೆದ ೨೨೩ ಕೊಳವೆ ಬಾವಿಗಳು ಸೇರಿದಂತೆ ಯಾವುದೆ ಕುಡಿಯುವ ನೀರಿನ ಯೋಜನೆಗಳಿಗೂ ಹಣ ಬಿಡುಗಡೆ ಆಗಲಿಲ್ಲ.
ಇದರಿಂದಾಗಿ ಆ ವರ್ಷದಲ್ಲಿ ಕೊರೆಸಿದ ಕೊಳವೆ ಬಾವಿ ಸೇರಿದಂತೆ ಕೈಗೊಂಡ ಎಲ್ಲ ಕುಡಿಯುವ ನೀರಿನ ಕಾಮಗಾರಿಗಳಿಗೂ ಹಣ ನೀಡಿಲ್ಲ.
ಈ ಪೈಕಿ ೨೦೧೬-–೧೭ನೇ ಸಾಲಿನಲ್ಲಿ ಬಿಡುಗಡೆಯಾದ ಹಣವನ್ನು ಕಳೆದ ಸಾಲಿನಲ್ಲಿ ಬಾಕಿ ಉಳಿಸಿಕೊಂಡ ಕೊಳವೆ ಬಾವಿಗಳು, ನೀರಿನ ಯೋಜನೆಗಳಿಗೆ ಹಣವನ್ನು ನೀಡಲಾಗಿದೆ. ೨೦೧೫-–೧೬ನೇ ಸಾಲಿನ ೨೨೩ ಕೊಳವೆ ಬಾವಿಗಳ ಪೈಕಿ ೧೩೦ಕ್ಕೆ ಮಾತ್ರ ಹಣ ನೀಡಿದ್ದು ಇನ್ನುಳಿದ ಕೊಳವೆ ಬಾವಿಗಳ ಹಣವನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿದೆ.
ಈ ವರ್ಷ ಕೇವಲ ೧೨ ಕೋಟಿ ರೂಪಾಯಿಗಳಷ್ಟೆ ಕುಡಿಯುವ ನೀರಿಗಾಗಿ ಬಿಡುಗಡೆಯಾಗಿದ್ದು ಅದರಲ್ಲಿ ೧೨೭ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ೬ ತಳಮಟ್ಟದ ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಕೊಳವೆ ಬಾವಿ ಕೊರೆಸುವುದು, ಅದಕ್ಕೆ ಪಂಪು ಮೋಟಾರ್ ಅಳವಡಿಕೆ, ವಿದ್ಯುತ್ ಸಂಪರ್ಕ, ಪೈಪ್ ಲೈನ್ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.
ಈಗಾಗಲೆ ಸಮಸ್ಯೆ ತಲೆ ದೋರಿರುವ ಗ್ರಾಮಗಳ ಜತೆಗೆ ೧೪೪ ಗ್ರಾಮಗಳಲ್ಲಿ ಸಮಸ್ಯೆ ಎದುರಾಗಲಿದ್ದು ಅಷ್ಟೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಭಾಯಿಸಲು ಈ ೧೨ ಕೋಟಿಯು ಸಾಲದಾಗಿದೆ.
- Advertisement -
- Advertisement -
- Advertisement -
- Advertisement -