Home News ಹೊಸಪೇಟೆ ಶಾಲೆಯ ಸಂಪಿನಲ್ಲಿ ಅಪರಿಚಿತ ಶವ ಪತ್ತೆ

ಹೊಸಪೇಟೆ ಶಾಲೆಯ ಸಂಪಿನಲ್ಲಿ ಅಪರಿಚಿತ ಶವ ಪತ್ತೆ

0

ತಾಲ್ಲೂಕಿನ ಹೊಸಪೇಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಳೆಕೊಯ್ಲಿನ ನೀರಿನ ಶೇಖರಣಾ ಸಂಪಿನಲ್ಲಿ ಸೋಮವಾರ ಅಪರಿಚಿತ ಶವವೊಂದು ಪತ್ತೆಯಾಗಿದೆ.
ಸೋಮವಾರ ಶಾಲೆಯು ಪ್ರಾರಂಭವಾಗುವಾಗ ಶಾಲಾ ಆವರಣದಲ್ಲಿ ಕೆಟ್ಟ ವಾಸನೆ ಬೀರುತ್ತಿದ್ದರಿಂದ ಯಾವುದಾದರೂ ಪ್ರಾಣಿ ಸತ್ತಿರಬಹುದೆಂಬ ಶಂಕೆಯಿಂದ ಹುಡುಕಾಡಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಳೆಕೊಯ್ಲಿನ ನೀರಿನ ಶೇಖರಣಾ ಸಂಪಿನ ಬಳಿ ನೊಣಗಳು ಕಂಡಿವೆ. ಸಂಪನ್ನು ಮುಚ್ಚಿದ್ದ ಕಲ್ಲು ಚಪ್ಪಡಿಯನ್ನು ಸರಿಸಿದಾಗ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀನಿವಾಸಮೂರ್ತಿ ಪರಿಶೀಲಿಸಿ, ನಂತರ ಜೆಸಿಬಿ ಬಳಸಿ ಸಂಪಿನ ಮೇಲ್ಮುಚ್ಚಳವನ್ನು ತೆಗೆಸಿ ಶವವನ್ನು ಹೊರತೆಗೆಸಿದರು. ಸುಮಾರು 45 ವರ್ಷ ವಯಸ್ಸಿನ ಗಂಡಿಸಿನ ಶವವಾಗಿದ್ದು, ಶವದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸಬ್‌ಇನ್ಸ್‌ಪೆಕ್ಟರ್‌ ಹೊನ್ನೇಗೌಡ, ಎ.ಎಸ್‌.ಐ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ಹಾಜರಿದ್ದರು.
ಊರಿನ ಮಧ್ಯೆ ಇರುವ ಶಾಲೆಯ ಆವರಣದಲ್ಲಿ ಶವ ದೊರೆತಿರುವುದರಿಂದ ಶಾಲಾ ಮಕ್ಕಳು ಸೇರಿದಂತೆ ಇಡೀ ಗ್ರಾಮವೇ ಗಾಬರಿಗೊಂಡಿದ್ದರು. ಶಾಲೆಯ ಆವರಣದಲ್ಲಿ ಸಾಕಷ್ಟು ಜನರು ಸೇರಿದ್ದರು.