Home News ಹುಟ್ಟಿದ ಮಣ್ಣಿಗೆ, ಸಮಾಜಕ್ಕೆ ಬೆಳಕಾಗಬೇಕು

ಹುಟ್ಟಿದ ಮಣ್ಣಿಗೆ, ಸಮಾಜಕ್ಕೆ ಬೆಳಕಾಗಬೇಕು

0

ಹುಟ್ಟಿದ ಮಣ್ಣಿಗೆ, ಸಮಾಜಕ್ಕೆ ಬೆಳಕಾಗಬೇಕು. ಮತ್ತೊಬ್ಬ ಮದರ್‌ ತೆರೇಸಾ ಹುಟ್ಟಿಬರಲು ಏಕೆ ನಾವು ಕಾಯಬೇಕು. ಅವರಿಂದ ಪ್ರೇರಣೆ ಪಡೆದು ಸಮಾಜಕ್ಕೆ ಉಪಯೋಗಿಗಳಾಗೋಣ ಎಂದು ಅನಾಥರನ್ನು ಸಾಕುವ ಆಶ್ರಮ ನಡೆಸುವ ಆಟೋ ರಾಜ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಸರ್‌.ಎಂ.ವಿಶ್ವೇಶ್ವರಯ್ಯ ವೇದಿಕೆಯಲ್ಲಿ ನಡೆದ ಪ್ರಥಮ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ಮಾತನಾಡಿದರು.
ನನ್ನ ಬಾಲ್ಯ ಬಹಳ ಕೆಟ್ಟದ್ದಾಗಿತ್ತು. 3ನೇ ಕ್ಲಾಸಿನವರೆಗೆ ಮಾತ್ರ ಶಾಲೆ ಕಂಡಿದ್ದು. ಕೆಟ್ಟ ಸಹವಾಸಕ್ಕೆ ಬಿದ್ದು ಪುಂಡ ಪೋಕರಿಯಾಗಿದ್ದೆ. ಜೈಲಿಗೂ ಹೋದೆ. ಅಲ್ಲಿನ ನರಕ ನನ್ನ ಮನಃ ಪರಿವರ್ತನೆ ಮಾಡಿತು. ಡ್ರೆೃವಿಂಗ್‌ ಕಲಿತೆ. ಆಮೇಲೆ ಆಟೋ ಓಡಿಸತೊಡಗಿದೆ. ನಿರ್ಗತಿಕರನ್ನು ಹೊತ್ತು ತಂದು ಸಾಕಲು ಶುರುಮಾಡಿದೆ. ಮೊದಲು ಬಹಳ ಕಷ್ಟವಾಗುತ್ತಿತ್ತು. ನಂತರ ದಾನಿಗಳ ಸಹಕಾರ ಸಿಕ್ಕಿತು. ಈಗ ನಮ್ಮ ಆಶ್ರಮದಲ್ಲಿ 750 ಮಂದಿ ಅನಾಥರು, ವೃದ್ಧರು, ನಿರ್ಗತಿಕರು, ಖಾಯಿಲೆಪೀಡಿತರು ಇದ್ದಾರೆ. ಪ್ರತಿ ದಿನ ನಾಲ್ಕೈದು ಮಂದಿ ಸಾಯುತ್ತಿರುತ್ತಾರೆ. ಅವರು ಮನಶ್ಶಾಂತಿಯಿಂದ ಸಾಯುವಂತಾಗಬೇಕು. ಮನುಷ್ಯರಲ್ಲೇ ದೇವರನ್ನು ಕಾಣಬಹುದು ಎಂಬುದು ನನ್ನ ಅನುಭವ ಎಂದು ವಿವರಿಸಿದರು.
ವಿದ್ಯಾರ್ಥಿಗಳು ತಮಗೆ ಉತ್ತಮ ಬದುಕನ್ನು ನೀಡಿದ ಪೋಷಕರು, ಮಾರ್ಗದರ್ಶನ ಮಾಡುವ ಗುರುಗಳು ಮತ್ತು ಪೊರೆಯುವ ಸಮಾಜಕ್ಕೆ ಋಣಿಗಳಾಗಿರಬೇಕು. ಮನುಷ್ಯತ್ವ, ಪ್ರೀತಿ, ವಿಶ್ವಾಸ ಇವು ನಮ್ಮೊಳಗೆ ಬೆಳೆಸಿಕೊಂಡಷ್ಟೂ ದ್ವಿಗುಣವಾಗುತ್ತವೆ ಎಂದು ಹೇಳಿದರು.
ಶಾಲೆಯ ಸಿಬ್ಬಂದಿ, ಗ್ರಾಮದ ಮುಖಂಡರು ಹಾಗೂ ಕಸಾಪ ತಾಲ್ಲೂಕು ಘಟಕದ ವತಿಉಯಿಂದ ಅನಾಥರಕ್ಷಕ ಆಟೋರಾಜ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಆಡಲು ಉಯ್ಯಾಲೆ, ಸೀಸಾ ಮೊದಲಾದ ಆಟೋಪಕರಣಗಳನ್ನು ಕೊಡಿಸುವುದಾಗಿ ಆಟೋರಾಜ ವಾಗ್ದಾನ ಮಾಡಿದರು.
ಶಾಲಾ ವಿದ್ಯಾರ್ಥಿಗಳು, ನಾಟಕ, ನೃತ್ಯ, ಹಾಸ್ಯ ವಾರ್ತೆ ಮುಂತಾದವುಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಿಕ್ಷಣ ಇಲಾಖೆಯ ಯೋಜನಾಧಿಕಾರಿ ಪಿ.ವೆಂಕಟೇಶ್‌, ಇಸಿಓ ಬೈರಾರೆಡ್ಡಿ, ಸಿಆರ್‌ಪಿ ನಾಗರಾಜ್‌, ಸೀನಪ್ಪ, ನಿವೃತ್ತ ಶಿಕ್ಷಕಿ ಫೈಜೂನ್‌, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಎಂ.ತ್ಯಾಗರಾಜ್‌, ಉಮಾಚನ್ನೇಗೌಡ, ಸಂಪತ್‌ಕುಮಾರ್‌, ಎಂಪಿಸಿಎಸ್‌ ಅಧ್ಯಕ್ಷ ರವಿಪ್ರಕಾಶ್‌, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಉಪಾಧ್ಯಕ್ಷ ಮುನಿವೆಂಕಟಸ್ವಾಮಿ, ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನ, ಶಿಕ್ಷಕರಾದ ಎಸ್‌.ಚಾಂದ್‌ಪಾಷ, ಅಶೋಕ್‌, ಭಾರತಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.