ಜಿಲ್ಲೆಯಲ್ಲಿ ನೀರಿನ ಅಭಾವದಿಂದಾಗಿ ರೇಷ್ಮೆ ಬೆಳೆ ಕುಸಿಯುತ್ತಿದ್ದು ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾಗಿದೆ. ಹಾಗಾಗಿ ಈ ಉದ್ಯಮದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದರೊಂದಿಗೆ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಈಚೆಗೆ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು ಹಾಲಿನ ಉತ್ಪಾದನೆ ಹಾಗು ಗುಣಮಟ್ಟದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕು. ಈ ಹಿಂದೆ ಸುಮಾರು ೧೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಇದೀಗ ೮.೯ ಲಕ್ಷ ಲೀಟರ್‌ಗೆ ಇಳಿದಿದೆ. ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಶಿಡ್ಲಘಟ್ಟ ತಾಲ್ಲೂಕು ಮುಂಬರುವ ದಿನಗಳಲ್ಲಿ ಒಂದನೇ ಸ್ಥಾನಕ್ಕೆ ಬರಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಗುಣಮಟ್ಟದ ಹಾಲು ಉತ್ಪಾದನೆ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಾಗಿ ದುಡಿಯುವುದರೊಂದಿಗೆ ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು. ಹಾಲಿನ ಉತ್ಪಾದನೆಯ ಜೊತೆ ಜೊತೆಗೆ ಹಾಲಿನ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರೂ ಸೇರಿದಂತೆ ಕಾರ್ಯದರ್ಶಿಗಳು ಎಚ್ಚರವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ನಿರ್ದೇಶಕ ತಾದೂರು ರಮೇಶ್, ಶ್ರೀನಿವಾಸಗೌಡ, ಮಲ್ಲೇನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್, ಒಕ್ಕೂಟದ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.