ಇಂದು ನಾವು ಸುಖಮಯ ಜೀವನ ನಡೆಸುತ್ತಿರುವ ಹಿಂದೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಅವರ ಹಗಲಿರುಳ ಅಪಾರವಾದ ಶ್ರಮ ಅಡಗಿದೆ, ಈ ಪುಣ್ಯ ಭೂಮಿ ಭಾರತಾಂಬೆಯ ಭವ್ಯ ನೆಲವನ್ನು ಬ್ರಿಟಿಷರಿಂದ ರಕ್ಷಿಸಿಕೊಳ್ಳಲು ಅಂದು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು ಎಂದು ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರರಾದ ಬಂಕಿಮ ಚಂದ್ರ ಚಟರ್ಜಿ ಮತ್ತು ಮಂಗಲ್ಪಾಂಡೆ ಅವರ ಸ್ಮರಣ ದಿನದ ಆಚರಣೆಯಲ್ಲಿ ಅವರು ಮಾತನಾಡಿದರು.
ಸಾವಿರಾರು ಮಂದಿ ತಮ್ಮ ಇಡೀ ಜೀವನವನ್ನು ದೇಶ ಸೇವೆಗಾಗಿ ಮುಡಿಪಾಗಿಟ್ಟು ಬ್ರಿಟಿಷರ ವಿರುದ್ದ ರಣರಂಗಕ್ಕೆ ಧುಮಿಕಿ ಹೋರಾಟ ನಡೆಸಿದ ಪರಿಣಾಮ ಭಾರತ ದೇಶಕ್ಕೆ ಬ್ರಿಟಿಷರಿಂದ ಮುಕ್ತಿ ಸಿಕ್ಕಿ ಸ್ವತಂತ್ರ ರಾಷ್ಟ್ರವಾಗಿ ರೂಪಾಂತರಗೊಂಡಿತು ಹಾಗೂ ನಾವೆಲ್ಲರು ಸ್ವತಂತ್ರ್ಯವಾಗಿ ಜೀವಿಸಲು ಸಾಧ್ಯವಾಯಿತು ಎಂದು ಹೇಳಿದರು.
ಶಿಕ್ಷಕ ಚಾಂದ್ಪಾಷ ಮಾತನಾಡಿ, ಬಂಕಿಮ ಚಂದ್ರ ಚಟರ್ಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೇರೇಪಿಸಿದ ವಂದೇ ಮಾತರಮ್ ಗೀತೆಯ ಕವಿಯಾಗಿ ಅತ್ಯಂತ ಪ್ರಸಿದ್ಧರು. ಇದೇ ಗೀತೆಯು ನಂತರದಲ್ಲಿ ಭಾರತದ ರಾಷ್ಟ್ರೀಯ ಗೀತೆಯಾಗಿ ಘೋಷಿಸಲ್ಪಟ್ಟಿತು. ಮಂಗಲ್ ಪಾಂಡೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ ಮಂಗಲ್ ಪಾಂಡೆ ಚಿರಸ್ಮರಣೀಯರಾಗಿದ್ದಾರೆ ಎಂದು ವಿವರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಇತಿಹಾಸವನ್ನು ಮರೆತರೆ ನಮ್ಮನ್ನೇ ಮರೆತಂತೆ, ನಮ್ಮತನವನ್ನೇ ಕಳೆದುಕೊಂಡಂತೆ. ಪ್ರತಿಯೊಬ್ಬ ಶಾಲಾ ವಿದ್ಯಾರ್ಥಿಗಳಿಗೂ ನಮ್ಮ ಇತಿಹಾಸದಲ್ಲಿ ಸಾಧನೆ ಮಾಡಿದವರ, ಸ್ವಾತಂತ್ರ್ಯ ಹೋರಾಟಗಾರರ ಪರಿಚಯವನ್ನು ಮಾಡಿಕೊಡಬೇಕು. ಇಂದಿನ ಮಕ್ಕಳಿಗೆ ಹಿರಿಯರ ಸಾಧನೆಗಳು ಪ್ರೇರಣೆಯಾಗಲಿ ಎಂದು ಹೇಳಿದರು.
ಶಿಕ್ಷಕರಾದ ಎ.ಎಂ.ಅಶೋಕ್, ಎಂ.ಭಾರತಿ, ಎಸ್ಡಿಎಂಸಿ ಉಪಾಧ್ಯಕ್ಷ ಮುನಿವೆಂಕಟಸ್ವಾಮಿ, ಸದಸ್ಯರಾದ ಆರ್.ಮಂಜುನಾಥ್, ಈಶ್ವರಾಚಾರಿ, ಗ್ರಾಮಸ್ಥರಾದ ಮುನಿರಾಜು, ನರಸಿಂಹಮೂರ್ತಿ, ವೆಂಕಟಮ್ಮ ಹಾಜರಿದ್ದರು.
- Advertisement -
- Advertisement -
- Advertisement -
- Advertisement -