Home News ಸ್ವಪ್ರತಿಷ್ಠೆಗಾಗಿ ಖಾಸಗಿ ವಸತಿಶಾಲೆಗಳತ್ತ ಆಕರ್ಷಿತರಾಗುತ್ತಿರುವ ಪೋಷಕರು

ಸ್ವಪ್ರತಿಷ್ಠೆಗಾಗಿ ಖಾಸಗಿ ವಸತಿಶಾಲೆಗಳತ್ತ ಆಕರ್ಷಿತರಾಗುತ್ತಿರುವ ಪೋಷಕರು

0

ಪೋಷಕರು ತಮ್ಮ ಸ್ವಪ್ರತಿಷ್ಠೆಗಾಗಿ ಖಾಸಗಿ ವಸತಿಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಕೌಟುಂಬಿಕ ಪ್ರೀತಿ, ಜವಾಬ್ದಾರಿ ಹಾಗೂ ಸಂಬಂಧಗಳ ಕೊರತೆಯುಂಟಾಗಲಿದೆ ಎಂದು ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ರಾಮಕೃಷ್ಣ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಸಮೀಪವಿರುವ ಮುತ್ತೂಟ್‌ ಹಣಕಾಸು ಸಂಸ್ಥೆಯಲ್ಲಿ ಭಾನುವಾರ ನಡೆದ ಉಚಿತ ಪುಸ್ತಕ ವಿತರಣೆ ಮತ್ತು ಶಿಕ್ಷಣ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸಿ ವಿದ್ಯಾರ್ಥಿಗಳ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪಠ್ಯದಲ್ಲಿ ಮಾನವೀಯ ಮೌಲ್ಯಗಳ ವಿಷಯಗಳನ್ನು ಅಳವಡಿಸಬೇಕಾದ ಅಗತ್ಯವಿದೆ. ಶಿಕ್ಷಣ ಕೇವಲ ಅಂಕಗಳಿಕೆ ಸೀಮಿತವಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಸಕ್ತಿ ಹೊಂದಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ನೀಡಬೇಕು. ಗಾಂಧಿಜಿ ಅವರ ಆಸೆಯಂತೆ ಮೂಲ ಶಿಕ್ಷಣ ಕಲಿಸಲು ಆದ್ಯತೆ ನೀಡಬೇಕೆಂದರು.
ತಾಲೂಕಿನ ತುಮ್ಮನಹಳ್ಳಿ ಸರಕಾರಿ ಶಾಲೆಯ ಶಿಕ್ಷಕ ಶ್ರೀಧರ್ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಿಗಾಗಿ ಆಹಾಕಾರ ಉಂಟಾಗಿ ಅಂತರ್ಜಲಮಟ್ಟ ಕುಸಿದು ಫ್ಲೋರೈಡ್ ಮಿಶ್ರಿತ ನೀರು ಸೇವಿಸುತ್ತಾ ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತಿದೆ. ಸಂಘ-ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ನೀರಿನ ಮಹತ್ವದ ಕುರಿತು ಜನರಲ್ಲಿ ಜಲಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಲೇಖನಾ ಸಾಮಾಗ್ರಿಗಳು ಹಾಗೂ ನೋಟ್‌ಪುಸ್ತಕಗಳನ್ನು ವಿತರಿಸಲಾಯಿತು.
ಮುತ್ತೂಟ್‌ ಸಂಸ್ಥೆಯ ಮಾಕೇಟಿಂಗ್ ಮುಖ್ಯಸ್ಥ ಶಿವಕುಮಾರ್, ವೈದ್ಯ ಡಾ.ಸತ್ಯನಾರಾಯಣರಾವ್‌, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆನೂರು ನಾರಾಯಣಪ್ಪ, ಉದ್ಯಮಿ ಎಂ.ಎಸ್‌.ಜ್ಞಾನೇಶ್ವರ್, ವಾಸವಿ ಶಾಲೆಯ ಶಿಕ್ಷಕ ನಾಗರಾಜ್, ಮುತ್ತೂಟ್‌ ಸಂಸ್ಥೆಯ ವ್ಯವಸ್ಥಾಪಕ ಮನೋಹರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.