Home News ಸೆಪ್ಟೆಂಬರ್ ೨ ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಸೆಪ್ಟೆಂಬರ್ ೨ ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

0

ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ, ಬೆಲೆ ಏರಿಕೆಯ ವಿರುದ್ಧ, ಕನಿಷ್ಠ ಕೂಲಿ ೧೮ ಸಾವಿರ ರೂಪಾಯಿಗಳ ವೇತನ ನೀಡಬೇಕು ಮುಂತಾದ ಬೇಡಿಕೆಗಳನ್ನಿಟ್ಟುಕೊಂಡು ಸೆಪ್ಟೆಂಬರ್ ೨ ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಗ್ರಾಮ ಪಂಚಾಯತಿಯ ನೌಕರರು ಸೇರಿದಂತೆ ಹಲವಾರು ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಸಿ.ಐ.ಟಿ.ಯು. ಮುಖಂಡರು ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ನೌಕರರು ದುಡಿಯುತ್ತಿರುವ ಸ್ಥಳಗಳಲ್ಲಿ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದರೂ ಕೂಡಾ ಇಲಾಖೆಯಿಂದ ಯಾವುದೇ ಭದ್ರತೆಯನ್ನು ನೀಡುತ್ತಿಲ್ಲ. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕನಿಷ್ಠ ವೇತನವನ್ನು ನೀಡಬೇಕೆಂಬ ನಿಯಮವಿದ್ದರೂ ಕೂಡಾ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ತಿಂಗಳು ಪೂರ್ತಿ ದುಡಿದರೂ ಕೂಡಾ ನೀಡುವಂತಹ ಗೌರವಧನವನ್ನು ನಿಗದಿತ ಸಮಯದಲ್ಲಿ ನೀಡುತ್ತಿಲ್ಲ. ಪಿಂಚಣಿಯನ್ನು ನಿಲ್ಲಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ, ಇವೆಲ್ಲವುಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ ೨ ರಂದು ಕರೆ ನೀಡಿರುವ ಮುಷ್ಕರಕ್ಕೆ ಎಲ್ಲಾ ನಾಗರಿಕರು ಸಹಕಾರ ನೀಡಬೇಕು, ಗ್ರಾಮ ಪಂಚಾಯತಿ ನೌಕರರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು ಮುಂತಾದವರೆಲ್ಲರೂ ಬೆಂಬಲ ನೀಡಲಿದ್ದೇವೆ ಎಂದರು.
ಮಿಷನ್ ಮೋಡ್ ವಿರೋಧಿಸಿ, 45ನೇ ಐ.ಎಲ್.ಸಿ ಶಿಫಾರಸ್ಸುಜಾರಿಗಾಗಿ ಒತ್ತಾಯಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಂಗನವಾಡಿ ನೌಕರರ ವಿರೋಧಿ ನೀತಿಗಳ ವಿರುದ್ಧ, ನಿವೃತ್ತಿ ಆದವರಿಗೆ ಇಡಿಗಂಟು ಪೆನ್ಷನ್ ಮುಂದುವರಿಸಲು ಒತ್ತಾಯಿಸಿ ಮುಷ್ಕರ ನಡೆಸುತ್ತಿರುವುದಾಗಿ ತಿಳಿಸಿದರು.
ಸಿ.ಐ.ಟಿ.ಯು. ತಾಲ್ಲೂಕು ಅಧ್ಯಕ್ಷ ಸಿ.ಎಸ್. ಸುದರ್ಶನ್, ಕುಂದಲಗುರ್ಕಿ ವೆಂಕಟೇಶಪ್ಪ, ದ್ಯಾವಪ್ಪ, ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಬಾಬಾಜಾನ್, ಸಿ.ಐ.ಟಿ.ಯು ಪ್ರಧಾನಕಾರ್ಯದರ್ಶಿ ಪಿ.ಮಂಜುಳಮ್ಮ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.