ನಗರದ ಹಳೆಯ ಪೊಲೀಸ್ ಠಾಣೆಯ ಬಳಿ ಇದ್ದ ನಗರಸಭೆಗೆ ಸೇರಿರುವ ಹಳೆಯ ಅಂಗಡಿ ಮಳಿಗೆಗಳನ್ನು ಗುರುವಾರ ಜೆಸಿಬಿಗಳನ್ನು ಬಳಸಿ ಕೆಡವಲಾಯಿತು.
ಕಳೆದ ಮೇ ತಿಂಗಳ 29ನೇ ತಾರೀಖಿನಂದು ಈ ಅಂಗಡಿ ಮಳಿಗೆಗಳನ್ನು ಕೆಡವಲು ಅಧಿಕಾರಿಗಳು ಮುಂದಾದಾಗ ತಡೆಯೊಡ್ಡಿದ ಮಳಿಗೆ ಬಾಡಿಗೆದಾರರು ನಮಗೆ ಒಂದು ತಿಂಗಳು ಕಾಲಾವಕಾಶ ಬೇಕು ತಿಂಗಳೊಳಗೆ ಅಂಗಡಿ ಖಾಲಿ ಮಾಡುತ್ತೇವೆ ಇಲ್ಲವಾದಲ್ಲಿ ಅಂಗಡಿಯಲ್ಲಿರುವ ಮಾಲು ಸಹಿತ ಕಟ್ಟಡ ಕೆಡವಲು ನಮ್ಮದೂ ಯಾವುದೇ ಅಭ್ಯಂತರವಿಲ್ಲ ಎಂದು ನಗರಸಭೆ ಆಯುಕ್ತರು ಹಾಗು ಪೊಲೀಸ್ ಇಲಾಖೆಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು.
ನಗರಸಭೆಗೆ ಸೇರಿದ 20 ಅಂಗಡಿಗಳ ಹಳೆ ಕಟ್ಟಡ ಕೆಡವಿ ಅದರ ಹಿಂದೆ ಇರುವ ಖಾಲಿ ನಿವೇಶನ ಸೇರಿಸಿ ಬೃಹತ್ ಸುಸಜ್ಜಿತ ನಗರಸಭಾ ಕಾರ್ಯಾಲಯದ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ತಯಾರಿ ನಡೆದಿದೆ. ಅದಕ್ಕಾಗಿ ನಗರೋತ್ಥಾನದ ಮೂರನೇ ಹಂತದಲ್ಲಿ ನಾಲ್ಕು ಕೋಟಿ ರೂಗಳನ್ನು ಮೀಸಲಿಡಲಾಗಿದೆ. 90 ಅಡಿ ಉದ್ದ ಮತ್ತು 120 ಅಡಿ ಅಗಲದ ಸ್ಥಳದಲ್ಲಿ ಒಟ್ಟು ಆರೂವರೆ ಕೋಟಿ ರೂಗಳ ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಿದ್ದು, ಅದರಲ್ಲಿ ಎರಡು ಬ್ಯಾಂಕುಗಳಿಗೆ, ಆಯುಕ್ತರ ಮನೆಗೆ, ವಾಹನ ನಿಲುಗಡೆಗೆ ಹಾಗೂ ಅಂಗಡಿ ಮಳಿಗೆಗಳಿಗೆ ಕೆಳಹಂತದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೇಲಿನ ಅಂತಸ್ತಿನಲ್ಲಿ ಆಯುಕ್ತರ ಕಚೇರಿ, ಸಭಾಂಗಣ ಮುಂತಾದವುಗಳಿರುತ್ತವೆ.
ಬಹುತೇಕ ಮಂದಿ ಬಾಡಿಗೆದಾರರು ಖಾಲಿಮಾಡಿದ್ದರೂ, ನಗರಸಭೆಯವರು ಕಟ್ಟಡವನ್ನು ಕೆಡವುದರ ಬಗ್ಗೆ ಮಾಹಿತಿ ತಿಳಿದ ಐವರು ಬಾಡಿಗೆದಾರರು ತಡೆಯಾಜ್ಞೆ ತರಲು ಬುಧವಾರ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದಿಂದ ತಡೆಯಾಜ್ಞೆಯ ಪ್ರತಿಯನ್ನು ತರುವುದರೊಳಗೆ ನಗರಸಭೆಯಿಂದ ಗುರುವಾರ ಬೆಳಿಗ್ಗೆಯೇ ಕಟ್ಟಡವನ್ನು ಕೆಡವಲಾಯಿತು.
‘ಕಳೆದ ಮೇ ತಿಂಗಳಿನಲ್ಲಿಯೇ ಹಳೆಯ ಕಟ್ಟಡವನ್ನು ಕೆಡವಬೇಕಾಗಿತ್ತು. ಇಷ್ಟೊತ್ತಿಗೆ ಹೊಸ ಕಟ್ಟಡದ ಕಾಮಗಾರಿ ಪ್ರಾರಂಭವಾಗಬೇಕಾಗಿತ್ತು. ಬಾಡಿಗೆದಾರರು ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್ ಮತ್ತು ಆಯುಕ್ತ ಎಚ್.ಎ.ಹರೀಶ್ ಅವರಿಗೆ ಒಂದು ತಿಂಗಳ ಕಾಲಾವಕಾಶ ಕೋರಿದ್ದರು. ಆದರೂ ತಡ ಮಾಡಿ ಕೆಡವಿದ್ದೇವೆ. ಕಟ್ಟಡದ ನೀಲನಕ್ಷೆ ತಯಾರಿದೆ. ಜಿಲ್ಲಾಧಿಕಾರಿಗಳಿಂದ ಕಾಮಗಾರಿಯ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ಅತ್ಯಂತ ಶೀಘ್ರವಾಗಿ ಜಿಲ್ಲೆಯಲ್ಲಿಯೇ ಅತ್ಯಂತ ಸುಸಜ್ಜಿತ ನಗರಸಭೆಯ ಕಾರ್ಯಾಲಯ ಶಿಡ್ಲಘಟ್ಟದಲ್ಲಿ ನಿರ್ಮಾಣ ಮಾಡುವುದು ನಮ್ಮ ಉದ್ದೇಶ’ ಎಂದು ನಗರಸಭೆಯ ಅಧ್ಯಕ್ಷ ಅಫ್ಸರ್‌ಪಾಷ ತಿಳಿಸಿದರು.
- Advertisement -
- Advertisement -
- Advertisement -
- Advertisement -