ಕುರಿ ಕೋಳಿ ಹಸು ಎಮ್ಮೆ ಸಾಕಾಣಿಕೆ ಮಾಡುವ ಮೂಲಕ ಸಮಗ್ರ ಕೃಷಿಯನ್ನು ಕೈಗೊಂಡರೆ ಮಾತ್ರವೇ ಆರ್ಥಿಕವಾಗಿ ಅಭಿವೃದ್ದಿಯಾಗಲು ಸಾಧ್ಯ ಎಂದು ಕೃಷಿ ಪಂಡಿತ ಪ್ರಶಸ್ತಿ ವಿಜೇತ, ರೈತ ಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ರೈತ ಕೂಟಗಳ ಮಹಿಳಾ ರೈತರಿಗೆ ಬೋದಗೂರಿನ ಸಿರಿ ಸಮೃದ್ದಿ ರೈತ ಕೂಟದಿಂದ ವಿಶೇಷ ತಳಿಯ ನಾಟಿ ಗಿರಿರಾಜ ಕೋಳಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಿ ಮಾತನಾಡಿದರು.
ಕೇವಲ ಕೃಷಿಯನ್ನು ಕೈಗೊಳ್ಳುವುದರಿಂದ ಆರ್ಥಿಕ ಲಾಭಗಳಿಸಲು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ ಕುರಿ ಸಾಕಾಣಿಕೆಯನ್ನು ಕೈಗೊಂಡು ಸಮಗ್ರ ಕೃಷಿ ಮಾಡಿದಾಗ ಮಾತ್ರ ಆರ್ಥಿಕವಾಗಿ ಸುಧಾರಿಸಬಹುದೆಂದರು.
ಕೃಷಿಯಲ್ಲೂ ಸಹ ಆಧುನಿಕ ಪದ್ದತಿಗಳ ಆವಿಷ್ಕಾರ ಆಗುತ್ತಿದೆ. ಯಂತ್ರಗಳ ಬಳಕೆ ಹೆಚ್ಚುತ್ತಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದಿಸಿ ಅಧಿಕ ಲಾಭ ಗಳಿಸುವುದು ನಮ್ಮ ಮುಂದಿರುವ ಸವಾಲು ಆಗಿದೆ. ಆದರೆ ಬಹುತೇಕ ರೈತರು ಹಳೆಯ ಪದ್ದತಿಗಳಿಗೆ ಜೋತು ಬಿದ್ದು ಕೃಷಿಯಲ್ಲಿ ನಷ್ಟ ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು.
ನಮ್ಮ ರೈತ ಕೂಟಗಳಿಂದ ಕಾಲ ಕಾಲಕ್ಕೆ ರೈತರಿಗೆ ತರಬೇತಿ, ಅಧ್ಯಯನ ಪ್ರವಾಸ, ಪ್ರಾತ್ಯಕ್ಷಿಕೆ, ಪ್ರಗತಿ ಪರ ರೈತರ ತೋಟಗಳ ವೀಕ್ಷಣೆ ಮೂಲಕ ಕೃಷಿಯ ಅಧ್ಯಯನಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಶೇಷ ತಳಿಯ ಕುರಿಗಳನ್ನು ನಮ್ಮ ಒಕ್ಕೂಟದ ಎಲ್ಲ ಸದಸ್ಯರಿಗೂ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಬೋದಗೂರು ಸಿರಿ ಸಮೃದ್ದಿ ರೈತ ಕೂಟದಿಂದ ಕಾಚಹಳ್ಳಿ, ಮಳ್ಳೂರು, ಹಿತ್ತಲಹಳ್ಳಿ, ಬೂದಾಳ ಇನ್ನಿತರೆ ಗ್ರಾಮಗಳ ೫೦ ಮಂದಿ ಮಹಿಳಾ ರೈತರಿಗೆ ತಲಾ ನಾಲ್ಕು ನಾಟಿ ಗಿರಿರಾಜ ವಿಶೇಷ ತಳಿಯ ಕೋಳಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಯಿತು.
ಬೋದಗೂರು ರಾಮಮೂರ್ತಿ, ಪ್ರಕಾಶ್, ಶ್ರೀನಿವಾಸ್‌ರೆಡ್ಡಿ, ಮುನೇಗೌಡ, ಮುನಿರಾಜು, ರತ್ನಮ್ಮ, ವನಿತ, ರಾಧಮ್ಮ ಮತ್ತಿತರರು ಹಾಜರಿದ್ದರು.