ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ಎನ್ ಆರ್ ಡಿ ಎಸ್ ಸಂಸ್ಥೆಯ ಕಾರ್ಯದರ್ಶಿ ಎಂ.ವೆಂಕಟರಮಣಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಬಾರ್ಡ್ ಹಾಗು ಎನ್ ಆರ್ ಡಿಎಸ್ ಸಂಸ್ಥೆಯ ಸಹಯೋಗದಲ್ಲಿ ಸುಸ್ಥಿರ ಅಭಿವೃದ್ದಿ ಯೋಜನೆಯಡಿ ಏರ್ಪಡಿಸಲಾಗಿದ್ದ ಸಿರಿಧಾನ್ಯಗಳ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಲವು ವರ್ಷಗಳಿಂದ ಸಿರಿಧಾನ್ಯಗಳನ್ನು ಬೆಳೆಯುವ ಪದ್ಧತಿಯನ್ನು ರೈತರು ಬಿಟ್ಟಿದ್ದರು. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ತಮ್ಮ ಆಸಕ್ತಿಯಿಂದ ಬೆಳೆದುಕೊಳ್ಳುತ್ತಿದ್ದರು. ಬಯಲು ಭಾಗದಲ್ಲಿನ ರೈತರು ರಾಗಿ, ಮುಸುಕಿನಜೋಳ, ಮುಂತಾದ ಬೆಳೆಗಳಿಗೆ ಮಾತ್ರ ಸೀಮಿತವಾಗಿದ್ದರು. ಕೃಷಿ ಕ್ಷೇತ್ರೋತ್ಸವದಂತಹ ಕಾರ್ಯಕ್ರಮಗಳ ಮೂಲಕ ರೈತರಿಗೆ ಸಿರಿಧಾನ್ಯಗಳಾದ ಸಾಮೆ, ಸಜ್ಜೆ, ಆರ್ಕ, ನವಣೆ, ಮುಂತಾದ ಬೆಳೆಗಳ ಕುರಿತು ಮೂಡಿಸಿದ್ದ ಜಾಗೃತಿಯ ಫಲವಾಗಿ ರೈತರು ತಮ್ಮ ಹೊಲಗಳಲ್ಲಿ ಸಿರಿಧಾನ್ಯಗಳನ್ನು ಬಿತ್ತನೆ ಮಾಡಲು ಮುದಾಗುತ್ತಿರುವುದು ಸಂತಸದ ವಿಷಯ ಎಂದರು.
ಕುರಬೂರಿನ ಕೃಷಿ ವಿಜ್ಞಾನ ಕೇಂದ್ರದ ಡಾ.ಆನಂದ್ ಮಾತನಾಡಿ ಸಿರಿದಾನ್ಯಗಳಿಂದ ಉತ್ತಮ ಆರೋಗ್ಯ ಸಿಗುತ್ತದೆ ಎನ್ನುವುದು ಒಂದು ಕಾರಣವಾದರೆ ಕಡಿಮೆ ಖರ್ಚಿನ ಬೆಳೆ ಇದಾಗಿದ್ದು ಪ್ರತಿಯೊಬ್ಬರೂ ಸಿರಿಧಾನ್ಯಗಳನ್ನು ಬೆಳೆಯಲು ಮುದಾಗಬೇಕು ಎಂದರು. ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಇದೀಗ ಉತ್ತಮ ಬೇಡಿಕೆಯಿದ್ದು ರಕ್ತದ ಒತ್ತಡ, ಸಕ್ಕರೆ ಕಾಯಿಲೆಗೆ ತುತ್ತಾದವರು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚು ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಸುರೇಂದ್ರ, ಸದಸ್ಯರಾದ ಟಿ.ಕೆ.ನಾಗರಾಜು, ಎಂ.ಪಿ.ಸಿ.ಎಸ್ ಅಧ್ಯಕ್ಷ ಮುನಿರಾಜು, ವಿಶ್ವನಾಥರೆಡ್ಡಿ, ಕೃಷಿ ಇಲಾಖೆಯ ಅಶ್ವತ್ಥನಾರಾಯಣ, ಯೋಜನಾಧಿಕಾರಿ ಎ.ಮುನಿರಾಜು, ರೈತರಾದ ಟಿ.ಪಿ.ವಿಜಯ್ಕುಮಾರ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -