Home News ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಮಳಿಗೆ ಪ್ರಾರಂಭ

ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳ ಮಳಿಗೆ ಪ್ರಾರಂಭ

0

ಸಂಪೂರ್ಣ ಸಾವಯವ ಉತ್ಪನ್ನಗಳು ಹಾಗೂ ಸಿರಿಧಾನ್ಯಗಳನ್ನು ಗುಣಮಟ್ಟಕ್ಕೆ ರಾಜಿಯಾಗದೆ ಸ್ಪರ್ಧಾತ್ಮಕ ಬೆಲೆಗಳಲ್ಲಿ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ ವತಿಯಿಂದ ಮಾರಲಾಗುತ್ತಿದೆ ಎಂದು ರೇಷ್ಮೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿ ರೆಡ್ಡಿ ತಿಳಿಸಿದರು.
ನಗರದ ಬಸ್‌ ನಿಲ್ದಾಣ ಬಳಿ ಇರುವ ರೇಷ್ಮೆ ವಿಸ್ತರಣಾ ಕಚೇರಿ ಆವರಣದಲ್ಲಿ ಪ್ರಾರಂಭಿಸಿರುವ ಮಳಿಗೆಯಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯನ್ನು ಒಂದು ಸಾವಿರ ಮಂದಿ ರೇಷ್ಮೆ ಬೆಳೆಗಾರರು ಸೇರಿಕೊಂಡು ರೈತರ ಹಿತದೃಷ್ಟಿ ಕಾಪಾಡಲು, ಅಭಿವೃದ್ಧಿಯ ಉದ್ದೇಶದಿಂದ ಪ್ರಾರಂಭಿಸಿದ್ದೇವೆ. ಹಲವಾರು ಕಾರ್ಯಯೋಜನೆಗಳು ನಮ್ಮ ಮುಂದಿವೆ. ಅವುಗಳಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿ ಉತ್ತಮ ಗುಣಮಟ್ಟದ ಸಿರಿಧಾನ್ಯ ಹಾಗೂ ಇತರೆ ಉತ್ಪನ್ನಗಳು, ರೇಷ್ಮೆ ಬೆಳೆಗಾರರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಗುಣಮಟ್ಟ ಕಾಯ್ದುಕೊಂಡು ಮಾರಾಟ ಪ್ರಾರಂಭಿಸಿದ್ದೇವೆ. ರೈತರಿಗೆ, ರೈತರಿಂದ ಮತ್ತು ರೈತರಿಗೋಸ್ಕರ ನಡೆಸುತ್ತಿರುವ ಈ ಮಳಿಗೆಯಲ್ಲಿ ಲಾಭಕ್ಕಿಂತ ಸೇವೆಗೆ ಮಹತ್ವವನ್ನು ನೀಡಿದ್ದೇವೆ ಎಂದು ಹೇಳಿದರು.
ರಾಜಮುಡಿ ಅಕ್ಕಿ, ಅರ್ಕ, ಸಾಮೆ, ಊದಲು, ಬರುಗು, ಕೊರಲೆ, ನವಣೆ, ಜೋಳ, ಅಗಸೆ ಬೀಜ, ಸಾಂಬಾರ್‌ ಪುಡಿ, ಜೋನಿ ಬೆಲ್ಲ, ಪುಡಿ ಬೆಲ್ಲ, ಬಕೆಟ್‌ ಬೆಲ್ಲ, ಜೇನು ತುಪ್ಪ, ಆಮ್ಲ ತೊಕ್ಕು, ಆಮ್ಲ ಜಾಮ್‌, ಅಗಸೆ ಚಟ್ನಿ ಪುಡಿ, ಶೇಂಗಾ ಚಟ್ನಿ ಪುಡಿ ಮುಂತಾದವುಗಳು ಇವೆ. ರೇಷ್ಮೆ ಬೆಳೆಗಾರರಿಗೆ ಬೇಕಾದ ಪೇಪರ್‌ಗಳು, ಹದಿನೆಂಟು ವಿಧದ ಸೋಂಕು ನಿವಾರಕಗಳು, ಸಾವಯವ ಸಿಂಪಡಣೆಗಳು, ಶೇಡ್‌ ನೆಟ್‌ ಮುಂತಾದ ವಸ್ತುಗಳೂ ಸಹ ಲಭ್ಯವಿದೆ ಎಂದರು.
ರೇಷ್ಮೆ ರೈತ ಉತ್ಪಾದಕ ಕಂಪನಿಯ ಸಿಇಒ ಜನಾರ್ಧನಮೂರ್ತಿ ಮಾತನಾಡಿ, ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸ್ಥಳಾವಕಾಶವನ್ನು ಕೋರಿದ್ದೇವೆ. ಈಗಾಗಲೇ ಗೊಬ್ಬರ, ಔಷಧಿಗಳು, ಬೀಜಗಳ ಮಾರಾಟಕ್ಕೆ ಅನುಮತಿ ಪಡೆದುಕೊಂಡಿದ್ದು, ಸ್ಥಳ ಸಿಕ್ಕ ನಂತರ ‘ಅಗ್ರಿ ಮಾರ್ಟ್‌’ ಪ್ರಾರಂಭಿಸುವ ಯೋಜನೆಯಿದೆ. ಕಡಿಮೆ ಬೆಲೆಗೆ ಗುಣಮಟ್ಟದ ರೈತರ ಉತ್ಪನ್ನಗಳು ಹಾಗೂ ರೈತರಿಗೆ ಅಗತ್ಯವಿರುವ ವಸ್ತುಗಳನ್ನು ಮಾರಾಟ ಮಾಡುವ ಯೋಜನೆಯಿದೆ. ಇನ್ನು ಮುಂದಿನ ದಿನಗಳಲ್ಲಿ ಚಾಕಿ ಕೇಂದ್ರ ಮತ್ತು ಆಟೋಮ್ಯಾಟಿಕ್‌ ರೀಲಿಂಗ್‌ ಮೆಷಿನ್‌ ತರುವ ಉದ್ದೇಶವಿದೆ ಎಂದು ವಿವರಿಸಿದರು.