Home News ಸಾಲ ಮರುಪಾವತಿಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ

ಸಾಲ ಮರುಪಾವತಿಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ

0

ದೇಶಾದ್ಯಂತ ಸಾಲ ಮರುಪಾವತಿಯಲ್ಲಿ ಮಹಿಳೆಯರು ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಮುಂಚೂಣಿಯಲ್ಲಿರುವುದರಿಂದ ಮಹಿಳೆಯರಿಗೆ ಸಾಲ ನೀಡಲೂ ಬ್ಯಾಂಕ್‌ಗಳವರು ಮುಂದೆಬರಬೇಕೆಂದು ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು. ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಭಕ್ತರಹಳ್ಳಿ ಗ್ರಾಮದ ಸಂಘದ ಶಾಖೆಯ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಮಹಿಳಾ ಸ್ವ-ಸಹಾಯ ಗುಂಪುಗಳ ಸಾಲ ಮತ್ತು ಕೆ.ಸಿ.ಸಿ. ಸಾಲ ವಿತರಣಾ ಸಮಾರಂಭದಲ್ಲಿ ೨ಕೋಟಿ ೩೮ ಲಕ್ಷದ ೮೦ ಸಾವಿರ ರೂ ಸಾಲದ ಚೆಕ್ಕುಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಬಡ್ಡಿ ರಹಿತ ಸಾಲಗಳನ್ನು ನಿಗದಿತ ಸಮಯದಲ್ಲಿ ರೈತರು ಮರುಪಾವತಿ ಮಾಡುವುದರೊಂದಿಗೆ ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು.ತೀವ್ರ ಮಳೆಯ ಕೊರತೆಯಿಂದಾಗಿ ಕೃಷಿಚಟುವಟಿಕೆಗಳಿಂದ ದೂರವುಳಿದು, ನಗರಪ್ರದೇಶಗಳ ಕಡೆಗೆ ಗುಳೆಹೊರಡುವಂತಹ ಸ್ಥಿತಿಗೆ ಬಂದು ತಲುಪಿರುವ ಈ ಭಾಗದ ಜನತೆಗೆ ಆಶಾಕಿರಣವಾಗಿ ಬಡ್ಡಿರಹಿತ ಸಾಲಗಳನ್ನು ನೀಡಲು ಮುಂದೆ ಬಂದಿರುವ ಕೋಲಾರ-ಚಿಕ್ಕಬಳ್ಳಾಪುರ ಡಿ.ಸಿ.ಸಿ. ಬ್ಯಾಂಕಿನ ಸೇವೆಯನ್ನು ಈ ಭಾಗದ ರೈತರು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು. ಈ ಭಾಗದ ಜನತೆಯ ದಶಕಗಳ ಕನಸಾಗಿರುವ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಅಗತ್ಯವಾಗಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಬೆಂಗಳೂರಿನಿಂದ ವ್ಯರ್ಥವಾಗಿ ವರ್ತೂರು ಕೆರೆಗೆ ಹರಿದು ಹೋಗುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಹರಿಸಲು ಚಿಂತನೆ ನಡೆಸಿದ್ದು ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳೊಡನೆ ಚರ್ಚಿಸಿ ಆದಷ್ಟು ಬೇಗ ಈ ಭಾಗಕ್ಕೆ ನೀರು ತರಲು ಪ್ರಾಂಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ನುಡಿದರು. ಶಾಸಕ ಎಂ.ರಾಜಣ್ಣ ಮಾತನಾಡಿ ಸಹಕಾರಿ ತತ್ವದಡಿಯಲ್ಲಿ ನಡೆಯುತ್ತಿರುವ ಈ ಬ್ಯಾಂಕುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸ್ಥಳೀಯ ಜನತೆಯ ಹೆಚ್ಚಿನ ಸಹಕಾರ ಅಗತ್ಯವಾಗಿದೆ, ಆಡಳಿತ ಮಂಡಳಿಗಳು ಹೆಚ್ಚು ಕಾಳಜಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಕೋಲಾರ ಡಿ.ಸಿ.ಸಿ.ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೆಗೌಡ ಮಾತನಾಡಿ ಈ ಭಾಗದ ರೈತರು ಹೂಡಿಕೆ ಮಾಡಿಟ್ಟಿರುವ ಹಣವನ್ನು ಕ್ರೋಡಿಕರಿಸಿ ಉಳಿಕೆ ಮಾಡಿದ ಹಣವನ್ನು ರೈತರು ಸೇರಿದಂತೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ೧೫ ಮಹಿಳಾ ಸ್ವಸಹಾಯ ಸಂಘಗಳಿಗೆ ೫೫ ಲಕ್ಷ ೬೦ ಸಾವಿರ ರೂ ಸೇರಿದಂತೆ ಕೆಸಿಸಿ ಸಾಲ ೯೨ ಮಂದಿ ಫಲಾನುಭವಿಗಳಿಗೆ ೧ಕೋಟಿ ೮೩ ಲಕ್ಷದ ೨೦ ಸಾವಿರ ಸೇರಿದಂತೆ ಒಟ್ಟು ೨ಕೋಟಿ ೩೮ ಲಕ್ಷದ ೮೦ ಸಾವಿರ ರೂ ಸಾಲದ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು.
ಮಳ್ಳೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಮುಖಂಡ ಬಿ.ಎನ್.ರವಿಕುಮಾರ್, ಕೆ.ಎಂ. ಜಗದೀಶ್‌, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ವೆಂಕಟಮೂರ್ತಿ, ಎಸ್‌.ಎನ್‌.ವೆಂಕಟೇಶ್‌, ಸೂರ್ಯನಾರಾಯಣಗೌಡ, ಕಾಳಪ್ಪ, ರಮೇಶ್‌, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ಡಿಸಿಸಿ ಬ್ಯಾಂಕ್ ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಆರ್.ಲಿಂಗರಾಜು, ತಾಲ್ಲೂಕು ಪಂಚಾಯತಿ ಸದಸ್ಯ ವೆಂಕಟೇಶ್, ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮಂಜುನಾಥ್, ಜಿ.ಕೆ.ಪೃಥ್ವೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.