ತಾಲ್ಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಸಮರ್ಪಕ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ರಸ್ತೆ ತಡೆ ನಡೆಸಿದರು.
ಚಿಂತಾಮಣಿ ಮತ್ತು ಜೂಲಪಾಳ್ಯ ನಡುವಿನ ಮಾರ್ಗದಲ್ಲಿ ಪ್ರತಿ ದಿನ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಆದರೆ ಶಾಲಾ ಕಾಲೇಜುಗಳ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ. ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳ ಅನುಕೂಲಕರ ಸಮಯಕ್ಕೆ ಬಸ್ಸುಗಳನ್ನು ಈ ಮಾರ್ಗದಲ್ಲಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಲ್ಲಿನ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕಾದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಈ ಭಾಗದ ಎಲ್ಲಾ ವಿದ್ಯಾರ್ಥಿಗಳು ಕೆ.ಎಸ್.ಆರ್.ಟಿ.ಸಿ ಬಸ್ ಪಾಸ್ ಹೊಂದಿದ್ದು, ದಿನಾ ಖಾಸಗಿ ವಾಹನಗಳಲ್ಲಿ ಓಡಾಡಬೇಕಾದ ಅನಿವಾರ್ಯತೆಯನ್ನು ಅಧಿಕಾರಿಗಳು ನಿರ್ಮಿಸಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿ ಉಗ್ರ ಪ್ರತಿಭಟನೆಯನ್ನು ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ವಸಂತ್ ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸಂಬಂಧಪಟ್ಟ ವಿಭಾಗದವರಿಗೆ ತಿಳಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾ ನಿರತರು ಹಿಂದಿರುಗಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಿಪ್ಪಣ್ಣ, ಆನಂದರೆಡ್ಡಿ, ಶಿವಾರೆಡ್ಡಿ, ವಿದ್ಯಾರ್ಥಿಗಳಾದ ಭಾನುಪ್ರತಾಪ್, ಮಂಜುನಾಥ, ನಂದೀಶ್, ಅನಿಲ್ಕುಮಾರ್, ಮಹೇಶ್, ಭಾಸ್ಕರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.