ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಒಂಭತ್ತು ದಿನಗಳ ಕಾಲ ನಡೆದ ಸಹಜ ಬೇಸಿಗೆ ಶಿಬಿರದ ಸಮಾರೊಪ ಸಮಾರಂಭ ಭಾನುವಾರ ನಡೆಯಿತು.
ಈ ಸಮಾರಂಭದಲ್ಲಿ ಮಕ್ಕಳು ಶಿಬಿರದಲ್ಲಿ ರಚಿಸಿದ ಕಲಾಕೃತಿಗಳನ್ನು ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಅನುಪಮಾ ಪ್ರಕಾಶ್ ಮಾತನಾಡಿ, ‘ಶಿಬಿರದಲ್ಲಿ ಮಕ್ಕಳ ಕಲಿಕೆಗಳು ಜೀವನಪೂರ್ತಿ ಇರುವಂತದ್ದು ಹಾಗೂ ಇದರಿಂದ ಮಕ್ಕಳು ಹೆಚ್ಚು ಸೃಜನಶೀಲರಾಗಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘವು ನಮ್ಮೂರ ಶಾಲೆಗೆ ನಮ್ಮೂರ ಯುವಜನರು ಪ್ರಶಸ್ತಿ ಪಡೆದಿರುವ ಹಿನ್ನೆಲೆಯಲ್ಲಿ ಶಾಲೆಯ ವತಿಯಿಂದ ಸಂಘದ ಅಧ್ಯಕ್ಷ ವಸಂತವಲ್ಲಭಕುಮಾರ್ ಮತ್ತು ಸದಸ್ಯರನ್ನು ಗೌರವಿಸಲಾಯಿತು.
ಎಲ್ಲಾ ಮಕ್ಕಳಿಗೂ ಶಿಬಿರದ ಪ್ರಮಾಣಪತ್ರಗಳನ್ನು, ಚಿಣ್ಣರ ಕಾಜಾಣ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘವು ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿತು. ಶಾಲೆಯ ಮಾಸಿಕ ಪತ್ರಿಕೆಯಾದ ಬೇಲಿಹೂ ಏಪ್ರಿಲ್ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಬೆಂಗಳೂರಿನ ಪವನ್, ಮುಖ್ಯಶಿಕ್ಷಕ ಎಚ್. ಮುನಿಯಪ್ಪ, ಶಿಕ್ಷಕರಾದ ಬಸವರಾಜ್, ಕೆ.ಶಿವಶಂಕರ್, ಜೆ.ಶ್ರೀನಿವಾಸ್, ಎಸ್. ಕಲಾಧರ್, ಎನ್.ಪದ್ಮಾವತಿ, ಗ್ರಾಮಸ್ಥರು ಹಾಗೂ ಸಂಘದ ಸದಸ್ಯರು ಹಾಜರಿದ್ದರು.