ಡೆಂಗ್ಯೂ ಪೀಡಿತ ಬಡವರಿಗೆ, ಗರ್ಭಿಣಿಯರು ಹಾಗೂ ಅಪಘಾತಕ್ಕೊಳಗಾದವರಿಗೆ ದಾನಿಗಳಿಂದ ಸಂಗ್ರಹಿಸಿದ ರಕ್ತವು ಜಿಲ್ಲೆಯಾದ್ಯಂತ ಬಳಕೆಯಾಗುತ್ತಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಭಾರತೀಯ ರೆಡ್‌ಕ್ರಾಸ್ ಸೊಸೈಟಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ನಡೆಸಿದ ರಕ್ತದಾನ ಶಿಬಿರದಲ್ಲಿ ರಕ್ತವನ್ನು ದಾನ ಮಾಡಿದ ನಂತರ ಅವರು ಮಾತನಾಡಿದರು.
ರಕ್ತದಾನದಿಂದ ಹಲವರ ಪ್ರಾಣ ರಕ್ಷಿಸಬಹುದಾಗಿದೆ. ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಆದ್ಯ ಕರ್ತವ್ಯಗಳಲ್ಲೊಂದು. ರಕ್ತದಾನದಿಂದ ದಾನಿಗಳ ಆರೋಗ್ಯವೂ ವೃದ್ಧಿಸುತ್ತದೆ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ರಕ್ತ ಸಂಗ್ರಹಣೆಯ ಕೇಂದ್ರವಿದ್ದು ನಾವು ದಾನ ಮಾಡಿದ ರಕ್ತ ಜಿಲ್ಲೆಯ ಜನರಿಗೇ ಅನುಕೂಲವಾಗುತ್ತದೆ. ಯುವಕರು ರಕ್ತದಾನವನ್ನು ಸಮಾಜ ಸೇವೆ ಎಂಬಂತೆ ಮಾಡಬೇಕು ಎಂದು ಹೇಳಿದರು.
ರಕ್ತದಾನ ಮಾಡಿದ ಸುಮಾರು 60 ಮಂದಿ ದಾನಿಗಳಿಗೆ ಶ್ಲಾಘನಾ ಪತ್ರವನ್ನು ವಿತರಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲು ಸಹಕರಿಸಿದ ವಿವಿಧ ಸಂಘ ಇಲಾಖೆಗಳಿಗೂ ಶ್ಲಾಘನಾ ಪತ್ರವನ್ನು ನೀಡಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ. ವಕೀಲರಾದ ಬೈರಾರೆಡ್ಡಿ, ಈ.ನಾರಾಯಣಪ್ಪ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಅನಿಲ್‌ಕುಮಾರ್, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ನಾಗರಾಜ್, ನರ್ಸಿಂಗ್ ಸೂಪರಿಂಡೆಂಟ್ ಶಮೀವುಲ್ಲಾ, ಕೃಷ್ಣಮೂರ್ತಿ, ಅಕ್ಕಲರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.