‘ಮನೆಗೊಂದು ಮಗು, ಮನೆಗೊಂದು ಗಿಡ’ ಸಂದೇಶವಿದ್ದಂತೆ, ಪ್ರಾಥಮಿಕ ಶಾಲೆಗೊಂದು ಕಂಪ್ಯೂಟರ್ ಅತ್ಯವಶ್ಯ ಸಂಗತಿಯಾಗಿ ಪರಿಣಮಿಸುತ್ತಿದೆ. ತಂತ್ರಜ್ಞಾನ ಏರು ಗತಿಯಲ್ಲಿ ಸಾಗುವಾಗ ಕಲಿಕೆಯೂ ಅದರೊಂದಿಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯತೆಯಿದೆ. ಇದನ್ನು ಮನಗಂಡು ಈಗಾಗಲೇ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವುದಾಗಿ ಪೋಷಕರನ್ನು ಆಕರ್ಷಿಸುತ್ತಿವೆ. ಹತ್ತು ಹಲವು ಖಾಸಗಿ ಶಾಲೆಗಳ ನಡುವೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಕಂಪ್ಯೂಟರ್ ಶಿಕ್ಷಣ ಕ್ರಾಂತಿ ಸದ್ದಿಲ್ಲದೆ ನಡೆದಿದೆ. ಗ್ರಾಮಸ್ಥರ ಸಹಾಯದಿಂದ ಶಾಲೆಗೆ ಕಂಪ್ಯೂಟರ್ ಮತ್ತು ಪ್ರಿಂಟರನ್ನು ತಂದು ಶಿಕ್ಷಕರು ಅದರಿಂದ ಹಲವಾರು ಉಪಯುಕ್ತ ಕೆಲಸಗಳನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳು ಆಟದ ಮೂಲಕ, ಚಿತ್ರಗಳ ಮೂಲಕ, ವೀಡಿಯೋ ನೋಡುವ ಮೂಲಕ, ಅಕ್ಷರಗಳನ್ನು ಮೂಡಿಸುವ ಮೂಲಕ ಕಂಪ್ಯೂಟರ್ ಕಲಿಕೆಯನ್ನು ನಡೆಸಿದ್ದಾರೆ.
‘ನಮ್ಮ ಶಾಲೆಯ ವಿಜ್ಞಾನ ಶಿಕ್ಷಕ ರಾಮಕೃಷ್ಣ ಅವರಿಗೆ ಕಂಪ್ಯೂಟರ್ ಜ್ಞಾನವಿದ್ದು, ಗ್ರಾಮಸ್ಥರ ಸಹಕಾರದಿಂದ ಶಾಲೆಗೆ ತರುವಂತಾಯಿತು. ಪ್ರಶ್ನೆಪತ್ರಿಕೆಗಳನ್ನು ಮೊದಲು ಡಿ.ಟಿ.ಪಿ ಮಾಡಿಸಿ ಜೆರಾಕ್ಸ್ ಪ್ರತಿಗಳನ್ನು ತರಬೇಕಿತ್ತು. ಆದರೆ ಈಗ ನಾವೇ ಶಾಲೆಯಲ್ಲಿ ತಯಾರಿಸುತ್ತೇವೆ. ಮಕ್ಕಳಿಗೆ ಕೊಡಲು ಮಾರ್ಕ್ಸ್ ಕಾರ್ಡ್ ನಾವೇ ಸುಂದರವಾಗಿ ರೂಪಿಸಿದ್ದು, ಶಾಲೆಯ ಚಿತ್ರವನ್ನೂ ಅದರ ಮೇಲೆ ಮೂಡಿಸಿದ್ದೇವೆ. ಅಕ್ಷರ ದಾಸೋಹ ಸೇರಿದಂತೆ ಶಾಲೆಯ ವಿವಿಧ ದಾಖಲೆಗಳನ್ನು ಕಂಪ್ಯೂಟರಿನಲ್ಲೇ ನಿರ್ವಹಿಸುತ್ತೇವೆ ಮತ್ತು ಇಲಾಖೆಗೆ ಬೇಕಿರುವುದನ್ನು ಪ್ರಿಂಟ್ ತೆಗೆದು ಕೊಡುತ್ತೇವೆ. ಶಾಲೆಯ ಗೋಡೆ ಪತ್ರಿಕೆಯನ್ನು ಮಕ್ಕಳೀಗ ಕಂಪ್ಯೂಟರ್ ನಲ್ಲಿ ರಚಿಸುತ್ತಿದ್ದಾರೆ. ಚಿತ್ರಕಲೆ, ಆಟ, ಪಾಠಕ್ಕೆ ಪೂರಕ ವೀಡಿಯೋ ವೀಕ್ಷಣೆ ಮಾಡುವ ಮಕ್ಕಳು, ಅವರು ರಚಿಸಿರುವ ವಿವಿಧ ಕ್ರಿಯಾಶೀಲತೆಗಳನ್ನು ಪ್ರಿಂಟ್ ತೆಗೆದು ಮನೆಗೂ ಕೊಂಡೊಯ್ಯುತ್ತಾರೆ’ ಎನ್ನುತ್ತಾರೆ ಶಿಕ್ಷಕ ನಾಗಭೂಷಣ್.
‘ನಮ್ಮ ಊರಿಗೆ ಪ್ರತಿ ದಿನ ಖಾಸಗಿ ಶಾಲೆಗಳ ಎಂಟು ಬಸ್ಸುಗಳು ಬಂದು ಮಕ್ಕಳನ್ನು ಕರೆದೊಯ್ಯುತ್ತವೆ. ಆದರೂ ಸರ್ಕಾರಿ ಶಾಲೆಯಲ್ಲಿ ಎಂಬತ್ತು ಮಂದಿ ಮಕ್ಕಳು ಓದುತ್ತಿದ್ದಾರೆ. ಖಾಸಗಿ ಶಾಲೆಗಳೊಂದಿ ಪೈಪೋಟಿ ನಡೆಸಲು ಮಕ್ಕಳಿಗೆ ಚೆನ್ನಾಗಿ ಕಲಿಸಲು ಶಿಕ್ಷಕರು ಅಪಾರ ಶ್ರಮವಹಿಸುತ್ತಾರೆ. ಅದಕ್ಕೆ ನಾವು ಗ್ರಾಮಸ್ಥರೂ ಸಹಕರಿಸುತ್ತೇವೆ. ಹಲವಾರು ಪ್ರೌಢಶಾಲೆಗಳಲ್ಲಿ ಸರ್ಕಾರದಿಂದ ನೀಡಿರುವ ಕಂಪ್ಯೂಟರ್ಗಳನ್ನು ಬಳಸದೇ ಬಿಟ್ಟಿರುವಾಗ, ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕಂಪ್ಯೂಟರ್ ಕಲಿಸುವುದು ನಮಗೆ ಹೆಮ್ಮೆ ತಂದಿದೆ’ ಎಂದು ಗ್ರಾಮದ ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.