ಸಮಾಜದ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬುಧವಾರ ಭೇಟಿ ನೀಡಿದ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಕೇಶವರೆಡ್ಡಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಪುರುಷೋತ್ತಮ್ ಹಾಗೂ ವಾರ್ಡನ್ ನಾಗರತ್ನಮ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಹಾಸ್ಟೆಲ್ನ ವಿದ್ಯಾರ್ಥಿನಿಯರು ಸಮರ್ಪಕವಾಗಿ ತಿಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿಲ್ಲ, ಬೆಳಿಗ್ಗೆ ೮ ಗಂಟೆಗೆ ಬಂದು ಕಾಟಾಚಾರದ ಅಡುಗೆ ಮಾಡಿ ತಿನ್ನಿ ಎಂದು ಬಲವಂತ ಮಾಡ್ತಾರೆ ಎಂದು ನೋವು ವ್ಯಕ್ತಪಡಿಸಿದಾಗ, ಜಿಲ್ಲಾ ಪಂಚಾಯತಿಯ ಅಧ್ಯಕ್ಷರು, ಅಧಿಕಾರಿಗಳಿಗೆ ಇಂತಹ ಅವ್ಯವಸ್ಥೆಯ ಆಗರವಾಗಿರುವ ಹಾಸ್ಟಲ್ಗಳನ್ನು ಸುಧಾರಿಸಲು ಕಣ್ಣು ಕಾಣುವುದಿಲ್ಲವೇ? ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ನಿಮ್ಮ ಮಕ್ಕಳನ್ನು ಹೀಗೆ ನೋಡಿಕೊಳ್ಳುತ್ತೀರಾ? ಕೂಡಲೇ ವಾರ್ಡ್ನ್ಗೆ ನೋಟಿಸ್ ನೀಡಿ ಅವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ ನೆಟ್ಟಿಗಿರುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿದ್ದೇನೆ ಎಂದು ಕೆ.ಡಿ.ಪಿ ಸಭೆಗೆ ಸುಳ್ಳು ಮಾಹಿತಿ ನೀಡಿದ ನಿಮ್ಮ ಕಾರ್ಯವೈಖರಿ ಇಲ್ಲಿ ಗೊತ್ತಾಗುತ್ತದೆ ಎಂದು ತಾಲ್ಲೂಕು ಪಂಚಾಯತಿಯ ಅಧ್ಯಕ್ಷೆ ಆಂಜಿನಮ್ಮ ವೆಂಕಟಪ್ಪ ಕೂಡ ಅಧಿಕಾರಿ ವಿರುದ್ಧ ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿಯ ಅಧ್ಯಕ್ಷರು ಹಾಸ್ಟೆಲ್ನಲ್ಲಿ ಬಯೋಮೆಟ್ರಿಕ್ ಕೆಟ್ಟುಹೋಗಿರುವುದು ನೋಡಿ ಕೂಡಲೇ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲೇ ಆದೇಶಿಸಿದರು. ಈ ಸಂದರ್ಭದಲ್ಲಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದಾದ ದಾಖಲೆಯಲ್ಲಿ ೬೪ ವಿದ್ಯಾರ್ಥಿನಿಯರಿದ್ದು, ಹಾಜರಿರುವುದು ಮಾತ್ರ 3೩ ಮಂದಿ ವಿದ್ಯಾರ್ಥಿನಿಯರು ಎಂಬುದು ತಿಳಿದು ಅಧಿಕಾರಿಗಳನ್ನು ಯಾರು ಅಟೆಂಡನ್ಸ್ ಹಾಕಿದ್ದು ಎಂದು ಕೇಳಿದಾಗ ವಾರ್ಡನ್ ನಾಗರತ್ನಮ್ಮ ತಡವರಿಸಿದರು.
ಹಾಸ್ಟಲ್ನಲ್ಲಿ ದಾಸ್ತಾನು ಕೊಠಡಿಯನ್ನು ಪರಿಶೀಲಿಸಿದ ವೇಳೆಯಲ್ಲಿ ಸಹ ಲೋಪದೋಷ ಕಂಡು ಬಂತು. ಕೂಡಲೇ ಹಾಸ್ಟಲ್ನಲ್ಲಿ ೫ ವಿದ್ಯಾರ್ಥಿನಿಯರ ಸಮಿತಿಯನ್ನು ರಚಿಸಿ, ಅವರ ಸಮ್ಮುಖದಲ್ಲಿ ಆಹಾರಪದಾರ್ಥಗಳನ್ನು ತೂಕ ಮಾಡಿ ಊಟೋಪಚಾರ ಮಾಡಬೇಕೆಂದು ಸೂಚಿಸಿ ಕೆಲವು ದಾಖಲೆಗಳನ್ನು ದಾಖಲಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಸತೀಶ್,ಶಿವಲೀಲಾ ರಾಜಣ್ಣ, ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಮುನೀಂದ್ರ, ಮುಖಂಡರಾದ ವೆಂಕಟಪ್ಪ, ಗಂಗುಲಪ್ಪ ಮತ್ತಿತರರು ಹಾಜರಿದ್ದರು.