ಶಿಡ್ಲಘಟ್ಟದ ಕಂದಾಯ ಭವನದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಚೇರಿಗಾಗಿ ನೀಡಿರುವ ಕೋಣೆಯಲ್ಲಿ ಬುಧವಾರ ನಡೆದ ತಾಲ್ಲೂಕು ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ನೂರು ವರ್ಷ ತುಂಬಿರುವ ಕಂದಾಯ ಭವನವೆಂದು ಕರೆಸಿಕೊಳ್ಳುವ ಈ ಪಾರಂಪರಿಕ ಕಟ್ಟಡವನ್ನು ಸೂಕ್ತವಾಗಿ ನಿರ್ವಹಣೆ ಮಾಡಿಕೊಳ್ಳುವ ಮೂಲಕ ತಾಲ್ಲೂಕಿನ ಐತಿಹಾಸಿಕ ಕುರುಹನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ತಿಳಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘ ತನ್ನದೇ ಆದ ಸ್ವಂತ ಭವನ ಹೊಂದುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಅನುದಾನದ ವಿಚಾರದಲ್ಲೂ ಸಹ ಸಕಾರಾತ್ಮಕ ಸ್ಪಂದನೆಗಳು ಸಿಕ್ಕಿವೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಹಾಗೂ ನಾನೂ ಕೂಡ ವೈಯಕ್ತಿಕವಾಗಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಮಾತನಾಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಗುರುಭವನಕ್ಕಾಗಿ ಸರ್ಕಾರದಿಂದ ಈಗಾಗಲೇ ನಿವೇಶನ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಎಲ್ಲಾ ನೌಕರರು ತಮ್ಮ ಒಂದು ದಿನದ ಸಂಬಳವನ್ನು ನೀಡಿ ಕಟ್ಟಡ ನಿರ್ಮಾಣಕ್ಕೆ ಬುನಾದಿ ಹಾಕಲು ಸಹಕಾರ ನೀಡಬೇಕು ಕೋರಿದರು.
ಕಳೆದ ಅನೇಕ ವರ್ಷಗಳಿಂದ ತಾಲ್ಲೂಕು ಸರ್ಕಾರಿ ನೌಕರರ ಸಂಘಕ್ಕೆ ಜಾಗವಿಲ್ಲದೇ ಸಭೆ ಸಮಾರಂಭಗಳನ್ನು ಖಾಸಗಿ ಕಟ್ಟಡಗಳಲ್ಲಿ ಮಾಡುವ ಸ್ಥಿತಿಯಿತ್ತು. ಈ ಬಗ್ಗೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದಾಗ ನಗರದ ಕಂದಾಯಭವನದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ಕೊಠಡಿಯೊಂದನ್ನು ನೀಡುವ ಮೂಲಕ ಸಂಘದ ಕಾರ್ಯ ಚಟುವಟಿಕೆಗಳನ್ನು ಮಾಡಲು ಅನುಕೂಲ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಎನ್.ಕೆ. ಗುರುರಾಜರಾವ್ ಮತ್ತು ಕೇಶವರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ಮತ್ತು ಸದಸ್ಯರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು .
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್, ಆರ್.ಐ ವಿಶ್ವನಾಥ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಲ್.ವಿ.ವೆಂಕಟರೆಡ್ಡಿ, ಅಕ್ಕಲ ರೆಡ್ಡಿ, ಎನ್.ಪಿ.ಎಸ್ ಅಧ್ಯಕ್ಷ ಗಜೇಂದ್ರ, ಉಪನ್ಯಾಸಕ ಎಚ್.ವಿ.ವೆಂಕಟಶಿವಾರೆಡ್ಡಿ, ಮಧು, ಪ್ರೀತಂ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -