ಕನ್ನಡ ಸಾರಸ್ವತ ಲೋಕಕ್ಕೆ ವಿ.ಸೀತಾರಾಮಯ್ಯನವರು ೩೦ ಕ್ಕೂ ಹೆಚ್ಚು ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದು, ನಿರಂತರ ನಾಡು-ನುಡಿಯ ಸೇವೆಯನ್ನು ಗುರಿಯಾಗಿಸಿಕೊಂಡಿದ್ದರು ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಗಾಂಧಿಜಯಂತಿ, ಲಾಲ್‌ಬಹದ್ದೂರ್ ಶಾಸ್ತ್ರೀ ಮತ್ತು ವಿ ಸೀತಾರಾಮಯ್ಯ ಜಯಂತಿ ಹಾಗೂ ಸ್ವಚ್ಚ ಭಾರತ್ ಆಂದೋಲನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ್ಯಾನಂತರದಲ್ಲಿ ದೇಶ ಎದುರಿಸಿದ ಗಡಿವಿವಾದಗಳಂತಹ ಗಂಭೀರ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ದೇಶಸೇವೆಯಲ್ಲಿಯೇ ತನುನೀಗಿದ ಲಾಲ್‌ಬಹದ್ದೂರ್ ಶಾಸ್ತ್ರೀಜಿಯವರ ಜೀವನಾದರ್ಶಗಳು ಅನುಕರಣೀಯ ಎಂದು ಅವರು ವಿವರಿಸಿದರು.
ಶಿಕ್ಷಕ ಎ.ಬಿ.ನಾಗರಾಜು ಅವರು ಗಾಂಧಿಜೀವನ ಕುರಿತು ಮಾತನಾಡಿದರು. ಶಿಕ್ಷಕ ಎಂ.ಎಂ.ಜಗದೀಶ್ ಅವರು ನೈರ್ಮಲ್ಯ ಕುರಿತು ಮಾತನಾಡಿದರು.
ಗ್ರಾಮದಲ್ಲಿ ಸ್ವಚ್ಚಭಾರತ್ ಅಭಿಯಾನ ಜಾಗೃತಿ ಜಾಥಾ ನಡೆಯಿತು. ಕಲ್ಲೇಶ್ವರ ಸ್ವಾಮಿ ದೇವಾಯದ ಆವರಣದಲ್ಲಿ ಸ್ವಚ್ಚ ಮಾಡುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಸ್.ಆರ್.ನಾಗೇಶ್, ಜೆ.ವೆಂಕಟಾಪುರ ಗ್ರಾಮಪಂಚಾಯತಿ ಅಧ್ಯಕ್ಷೆ ಜಿ.ಭಾಗ್ಯಮ್ಮ, ಸದಸ್ಯ ಎನ್.ಅಶ್ವತ್ಥಪ್ಪ, ಚಂದ್ರೇಗೌಡ, ಶಿವಶಂಕರಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಕೆ.ಕಾತ್ಯಾಯಿನಿ, ಎಂ.ದೇವರಾಜು, ಮುಖ್ಯಶಿಕ್ಷಕ ವಿ.ಎನ್.ಗೋಪಾಲಕೃಷ್ಣಯ್ಯ, ಶಿಕ್ಷಕ ಬಿ.ನಾಗರಾಜು, ಎಚ್.ತಾಜೂನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
[images cols=”three” lightbox=”true”]
[image link=”1862″ image=”1862″]
[image link=”1863″ image=”1863″]
[image link=”1864″ image=”1864″]
[/images]