ನಗರದ ಸಂತೆ ಮೈದಾನದಲ್ಲಿ ನಗರಸಭೆಯಿಂದ ನಿರ್ಮಾಣ ಮಾಡಲಾಗಿರುವ ಕಾಲುವೆಯ ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವುದರಿಂದ ಹಲವು ಮಂದಿ ವ್ಯಾಪಾರಸ್ಥರು ಬಿದ್ದು ಗಾಯಗೊಂಡಿರುವುದರ ಜೊತೆಗೆ ಜನರಿಗೆ ತೊಂದರೆಯಾಗುತ್ತಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.
ನಗರದಲ್ಲಿ ಪ್ರತಿ ಸೋಮವಾರದಂದು ನಡೆಯುವ ವಾರದ ಸಂತೆಯ ಮೈದಾನದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸದೆ, ಕಳೆದ ಎರಡು ತಿಂಗಳ ಹಿಂದೆ ಕಾಲುವೆಯನ್ನು ಮಾಡಿದ್ದಾರೆ. ಆದರೆ ಕಾಲುವೆಯ ಕಾಮಗಾರಿಯನ್ನು ಇದುವರೆಗೂ ಪೂರ್ಣಗೊಳಿಸಿಲ್ಲ. ಇದರಿಂದ ಸಂತೆಯಲ್ಲಿ ವ್ಯಾಪಾರ ಮಾಡಲು ಬಂದಿರುವ ಹಲವಾರು ಮಂದಿ ವ್ಯಾಪಾರಸ್ಥರು ಕಾಲುವೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಗ್ರಾಹಕರು ಕೂಡಾ ಸಂತೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನಗರಸಭೆಯ ಆಯುಕ್ತರು ಹಾಗೂ ಶಾಸಕರಿಗೂ ಮನವಿ ಕೊಟ್ಟಿದ್ದರೂ ಈ ಬಗ್ಗೆ ಯಾರೂ ಗಮನಹರಿಸಿಲ್ಲ.
ಸಂತೆಯಲ್ಲಿ ಸ್ವಚ್ಚತೆಯಿಲ್ಲ. ಓಡಾಡಲು ಸಾಧ್ಯವಾಗುತ್ತಿಲ್ಲ. ಹಣದ ತೀವ್ರ ಕೊರತೆಯ ನಡುವೆಯೂ ಸಾವಿರಾರು ರೂಪಾಯಿಗಳ ಬಂಡವಾಳ ಹಾಕಿದ್ದರೂ ವ್ಯಾಪಾರಗಳಿಲ್ಲದೆ ನಷ್ಟ ಅನುಭವಿಸುವಂತಾಗಿದೆ. ಭಾನುವಾರ ರಾತ್ರಿ ಬಿದ್ದಿರುವ ಮಳೆಯಿಂದಾಗಿ ಸಂತೆಯ ಮೈದಾನ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. ನಗರಸಭೆಯವರು ಈ ಬಗ್ಗೆ ಗಮನಹರಿಸಬೇಕು. ಸಂತೆ ಮೈದಾನವನ್ನು ಸ್ವಚ್ಚಗೊಳಿಸಬೇಕು ಅಪೂರ್ಣವಾಗಿರುವ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ವ್ಯಾಪಾರಸ್ಥರಾದ ಮುನೀಂದ್ರ, ಭಾಗ್ಯಮ್ಮ, ರಾಮಚಂದ್ರ, ಶಿವಕುಮಾರ್, ಮುಂತಾದವರು ಒತ್ತಾಯ ಮಾಡಿದ್ದಾರೆ.