Home News ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ ಆರಂಭಗೊಂಡ ಕೊಂಬಿನ ಸಿಂಗಾರ

ಸಂಕ್ರಾಂತಿ ಸಮೀಪಿಸುತ್ತಿದ್ದಂತೆಯೇ ಆರಂಭಗೊಂಡ ಕೊಂಬಿನ ಸಿಂಗಾರ

0

ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದ್ದಂತೆ ಹಳ್ಳಿಗಳಲ್ಲಿ ಸಂಭ್ರಮದ ವಾತಾವರಣ ಶುರುವಾಗುತ್ತದೆ. ದನಕರುಗಳು ಮತ್ತು ಎತ್ತುಗಳನ್ನು ಅಲಂಕರಿಸಲು ಪ್ರಾರಂಭಿಸುತ್ತಾರೆ. ಶಿಡ್ಲಘಟ್ಟ ತಾಲ್ಲೂಕಿನಲ್ಲೂ ಎತ್ತುಗಳನ್ನು ಸಿಂಗರಿಸುವ ಕೆಲಸ ಆರಂಭವಾಗಿದೆ. ಎತ್ತುಗಳನ್ನು ತೊಳೆದು ಗೆಜ್ಜೆಕಟ್ಟಿ ಹೊಸ ನೂಲುಗಳನ್ನು ಹಾಕುವ ಕೆಲಸ ಶುರುವಾಗಿದೆ.
ಮೊದಲು ಎತ್ತುಗಳ ಕೊಂಬುಗಳನ್ನು ಮೊನಚಾದ ದೋಟಿ ಮಚ್ಚಿನಿಂದ ಹೆರೆಯುವರು. ಇದನ್ನು ’ಕೊಮ್ಮು ಜೀವೋದು’ ಎನ್ನುತ್ತಾರೆ. ಇದರಿಂದ ಕೊಂಬು ನಯವಾಗುವುದಲ್ಲದೆ ಹೊಳಪು ಪಡೆಯುತ್ತದೆ. ಅದಕ್ಕೆ ಬಣ್ಣದ ಟೇಪುಗಳನ್ನು ಕಟ್ಟುವುದು, ಬಣ್ಣ ಬಳಿಯುವುದು ಮುಖ್ಯವಾದದ್ದು.
ಆದರೆ ಕೊಂಬುಗಳನ್ನು ಹೆರೆಯುವುದು ಎಲ್ಲರಿಂದಲೂ ಅಸಾಧ್ಯ. ಇದನ್ನು ವೃತ್ತಿಪರರೇ ಮಾಡಬೇಕು. ಎತ್ತನ್ನು ಒಬ್ಬರು ಗಟ್ಟಿಯಾಗಿ ಹಿಡಿಕೊಂಡರೆ ಚೂಪಾದ ದೋಟಿಮಚ್ಚಿನಿಂದ ಕೊಂಬನ್ನು ಚೂಪು ಮಾಡುತ್ತಾರೆ. ಎತ್ತಿಗೆ ಗಾಯವಾಗದಂತೆ, ನೋವಾಗದಂತೆ ಚಾಕಚಕ್ಯತೆಯಿಂದ ಮಾಡುವ ಅವರ ಕೆಲಸದ ಹಿಂದೆ ಅಪಾರ ಅನುಭವ ಕಂಡುಬರುತ್ತದೆ.

ಎತ್ತಿನ ಕೊಂಬನ್ನು ಮೊನಚಾದ ದೋಟಿ ಮಚ್ಚಿನಿಂದ ಜೀವುತ್ತಿರುವುದು.
ಎತ್ತಿನ ಕೊಂಬನ್ನು ಮೊನಚಾದ ದೋಟಿ ಮಚ್ಚಿನಿಂದ ಜೀವುತ್ತಿರುವುದು.

ಹಿಂದೆ ನಾಟಿ ತಳಿಗಳು ಹೆಚ್ಚಾಗಿದ್ದುದರಿಂದ ಈ ಕೊಂಬನ್ನು ಹೆರೆಯುವ ವೃತ್ತಿಯವರಿಗೆ ಕೆಲಸ ಸದಾ ಕೆಲಸ ಸಿಗುತ್ತಿತ್ತು. ಹಾಯುವ ದನಗಳಿಗೆ ಕೊಂಬನ್ನು ಮೊಂಡು ಮಾಡಿಸುವುದು. ಕೊಂಬು ನೇರವಾಗಿ ಬೆಳೆಯಲೆಂದು ಎರಡು ಕೊಂಬುಗಳ ಮಧ್ಯೆ ಮರದ ಚಕ್ಕೆ ಇಡುವುದು. ಅಲಂಕಾರಿಕವಾಗಿ ಉದ್ದುದ ಕೊಂಬನ್ನು ಹೆರೆಯಿಸುವುದು. ಅದಕ್ಕೆ ಬಣ್ಣ ಕೂರಿಸುವುದು ಮುಂತಾದ ಹಲವು ಕೆಲಸಗಳಿರುತ್ತಿದ್ದವು. ಈಗ ನಾಟಿ ತಳಿಗಳು ಕಣ್ಮರೆಯಾಗುತ್ತಿವೆ ಹಾಗೂ ಈಗಿನ ಸೀಮೆ ಹಸುಗಳಿಗೆ ಕೊಂಬೇ ಇರುವುದಿಲ್ಲ. ಎತ್ತುಗಳ ಸಾಕಾಣಿಕೆ ಕಷ್ಟವೆಂದು ಸಾಕುವವರೇ ಕಡಿಮೆಯಾಗುತ್ತಿರುವುದರಿಂದ ಈ ವೃತ್ತಿಯು ಅಳಿವಿನಂಚಿನಲ್ಲಿದೆ.
ಸೀಮೆ ಹಸುಗಳಿಗೆ ಕೊಂಬಿನ ಸಿಂಗಾರದ ಭಾಗ್ಯವಿಲ್ಲ. ನಾಟಿ ದನಗಳಿಗೆ ಮಾತ್ರ ಕೊಂಬಿರುತ್ತದೆ ಮತ್ತು ಅದನ್ನು ಹೇಗೆ ಬೇಕಾದರೂ ಸಿಂಗರಿಸಬಹುದು. ಹೆಂಗಸರು ಘಮಲು ಎಣ್ಣೆ ಹಚ್ಚಿಕೊಂಡು ಕೂದಲನ್ನು ಬಾಚಿ ಮುಡಿಕಟ್ಟಿಕೊಳ್ಳುವ ಹಾಗೆ ದನಗಳ ಕೊಂಬನ್ನು ಜೀವಿ, ನಯಸ್ಸುಗೊಳಿಸಿ ಹೊಳಪುಬರಲು ಎಣ್ಣೆ ಸವರುತ್ತಾರೆ. ಅದಕ್ಕೆ ಕೊಂಬುಕುಪ್ಪು, ಗೆಜ್ಜೆಗಳನ್ನು ಹಾಕಿ ಅಲಂಕರಿಸುತ್ತಾರೆ.
ಹಿಂದೆ ಕೊಂಬುಗಳು ಬಹೂಪಯೋಗಿ ಆಗಿತ್ತು. ಬರಬರುತ್ತ ನಾಟಿಕಾರು ತಳಿಗಳ ಸಂಖ್ಯೆಯನ್ನು ಸೀಮೆತಳಿಗಳು ಕಡಿಮೆ ಮಾಡಿದವು. ಹೀಗಾಗಿ ಕೊಂಬುಗಳ ವಿವಿಧ ಬಳಕೆ ತಗ್ಗಿತು. ಕೊಂಬುಗಳಿಂದ ಮಾಡುತ್ತಿದ್ದ ಬಾಚಣಿಗೆ ದಂತದ ಬಾಚಣಿಗೆಯಂತೆಯೇ ಆಕರ್ಷಕವಾಗಿರುತ್ತಿತ್ತು. ಇಂದಿಗೂ ಕೆಲವರು ಬೀದಿಬದಿಯಲ್ಲಿ ಕೊಂಬುಗಳಿಂದ ವಿವಿಧ ಪಕ್ಷಿಗಳು, ಗೊಂಬೆಗಳನ್ನು ಮಾಡಿ ಮಾರುವುದನ್ನು ಬೆಂಗಳೂರಿನಂತಹ ನಗರಗಳಲ್ಲಿ ನೋಡಬಹುದು.
ಈಗಿನಂತೆ ಮೈಕುಗಳಿರದಿದ್ದ ದಿನಗಳಲ್ಲಿ ಬೀದಿಬದಿಯ ವ್ಯಾಪಾರಿಗಳು ಕೊಂಬನ್ನು ಮೈಕಿನಂತೆ ಬಳಸುತ್ತಿದ್ದರು. ‘ಸಿಂಗನಾದಂ ಜೀಲಕರ್ರ’ ಎಂಬ ತೆಲುಗು ಗಾದೆ ಇದಕ್ಕೆ ಪುರಾವೆಯನ್ನು ನೀಡುತ್ತದೆ. ಸಿಂಗ ಎಂದರೆ ಕೊಂಬು. ಹಿಂದೆ ಮಸಾಲೆ ಸಾಮಾನುಗಳು ಹಡಗುಗಳ ಮೂಲಕ ಬಂದರಿಗೆ ಬರುತ್ತಿದ್ದವು. ಅದನ್ನು ಪಡೆದು ತಂದ ಸಂಚಾರಿ ವ್ಯಾಪಾರಿಗಳು ಬೀದಿಬೀದಿ ತಿರುಗುತ್ತಾ ಕೊಂಬಿನ ಕೆಳ ರಂಧ್ರಕ್ಕೆ ಬಾಯಿ ಇಟ್ಟು ಸಾರುತ್ತಿದ್ದರು.
‘ಸೊಟ್ಟಕೊಂಬುಗಳಿರುವ ದನಗಳಿಗೆ ಬೆಲೆ ಕಡಿಮೆ. ಹಾಗಾಗಿ ಹೋರಿ ಕರುಗಳಿಗೆ ಕೊಂಬುಗಳ ಮಧ್ಯೆ ಮರದ ತುಂಡನ್ನಿಟ್ಟು, ಕೊಂಬಿನ ತುದಿಗೆ ಕಂಬಿಯನ್ನು ಕಟ್ಟಿ ನೆಟ್ಟಗೆ ಕೊಂಬುಗಳು ಬೆಳೆಯುವಂತೆ ನೋಡಿಕೊಳ್ಳುತ್ತೇವೆ. ಕೊಂಬು ಬೆನ್ನಾಗಿದ್ದರೆ ಮಾತ್ರ ಅದು ಲಕ್ಷಣವಂತ ದನವಾಗುತ್ತದೆ’ ಎನ್ನುತ್ತಾರೆ ದೇಶದಪೇಟೆಯ ರವಿ.