ಆಮದು ರೇಷ್ಮೆಯ ಮೇಲಿನ ಸುಂಕ ಕಡಿತ, ಹೆಚ್ಚಾದ ಗೂಡಿನ ಉತ್ಪಾದನೆ, ಚೀನಾ ರೇಷ್ಮೆಯತ್ತ ಒಲವು ತೋರುತ್ತಿರುವ ಬಟ್ಟೆ ತಯಾರಕರು, ಮಾರುಕಟ್ಟೆಯಲ್ಲಿ ಹಣದ ಮುಗ್ಗಟ್ಟು ಮುಂತಾದ ಕಾರಣಗಳು ಸೇರಿಕೊಂಡು ಕಳೆದೊಂದು ವಾರದಿಂದ ರೇಷ್ಮೆಗೂಡು ಹಾಗೂ ರೇಷ್ಮೆನೂಲಿನ ಬೆಲೆ ದಿನ ದಿನಕ್ಕೂ ಇಳಿಮುಖವಾಗತೊಡಗಿದ್ದು ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆದಾರರಲ್ಲಿ ಆತಂಕ ಮನೆ ಮಾಡಿದೆ.
ದೇಶದಲ್ಲಿಯೆ ಅತಿ ಹೆಚ್ಚು ರೇಷ್ಮೆಗೂಡು ಹಾಗೂ ರೇಷ್ಮೆನೂಲಿನ ವಹಿವಾಟು ನಡೆಯುವ ಶಿಡ್ಲಘಟ್ಟದಲ್ಲಿ ಕಳೆದ ಐದಾರು ದಿನಗಳಿಂದ ದಿನ ದಿನಕ್ಕೂ ರೇಷ್ಮೆನೂಲಿನ ಧಾರಣೆ ಕುಸಿಯತೊಡಗಿದೆ. ಅದೇ ರೀತಿಯಾಗಿ ರೇಷ್ಮೆಗೂಡಿನ ಧಾರಣೆ ಸಹ ಇಳಿಮುಖವಾಗುತ್ತಿದೆ.
ಕೇಂದ್ರ ಸರ್ಕಾರ ವಿದೇಶಿ ಆಮದು ರೇಷ್ಮೆಯ ಮೇಲಿನ ಸುಂಕವನ್ನು ಶೇ. ೧೫ರಿಂದ ೧೦ಕ್ಕೆ ಇಳಿಸಿದ ಪರಿಣಾಮ ದೇಶಕ್ಕೆ ಚೀನಾದಿಂದ ಆಮದಾಗುತ್ತಿರುವ ರೇಷ್ಮೆನೂಲಿನ ಪ್ರಮಾಣ ಏರಿಕೆಯಾಗಿದ್ದು, ಬೆಲೆಯೂ ಕಡಿಮೆಯಾಗಿದ್ದು, ದೇಶೀಯ ರೇಷ್ಮೆನೂಲಿನ ಬೇಡಿಕೆ ಕೊಂಚ ತಗ್ಗಿದೆ ಮತ್ತು ಬೆಲೆ ಕುಸಿಯತೊಡಗಿದೆ. ರೇಷ್ಮೆನೂಲಿನ ಜತೆ ಜತೆಗೆ ರೇಷ್ಮೆಗೂಡಿನ ಬೆಲೆಯೂ ಕುಸಿಯತೊಡಗಿದೆ.
ಕಳೆದ ವಾರದ ಹಿಂದೆ ೩೭೦ರ ಆಸುಪಾಸಿನಲ್ಲಿ ಇದ್ದ ರೇಷ್ಮೆಗೂಡಿನ ಗರಿಷ್ಠ ಬೆಲೆ ಇದೀಗ ೩0೦ರ ಆಸುಪಾಸಿಗೆ ಇಳಿದಿದೆ. ದಿನ ಕಳೆದಂತೆ ಇನ್ನಷ್ಟು ಕುಸಿಯಲಿದೆ. ಸೋಮವಾರ ಮಾರುಕಟ್ಟೆಯಲ್ಲಿ ಸರಾಸರಿ ಗೂಡಿನ ಬೆಲೆ 200 ರೂಗಳಿಗೆ ಇಳಿದಿದೆ. ಇದು ರೇಷ್ಮೆ ಬೆಳೆಗಾರರನ್ನು ಹೆಚ್ಚಿನ ಸಂಕಷ್ಟಕ್ಕೆ ದೂಡಿದೆ.
ಕಳೆದ ವಾರದ ಹಿಂದೆ ೨೬೦೦-–೨೭೦೦ ರೂಪಾಯಿ ಇದ್ದ ಸಣ್ಣ ರೇಷ್ಮೆನೂಲಿನ ಬೆಲೆ ಇದೀಗ ೨೪೦೦-–೨೫೦೦ಕ್ಕೆ ಕುಸಿದಿದೆ. ಹಾಗೆಯೆ ದಪ್ಪ ರೇಷ್ಮೆನೂಲಿನ ಬೆಲೆಯಲ್ಲೂ ಸಹ ಇಳಿಕೆ ಕಂಡಿದ್ದು ೨೪೦೦–-೨೭೦೦ ರೂಪಾಯಿ ಇದ್ದದ್ದು ಇದೀಗ ೨೦೦೦–-೨೩೦೦ಕ್ಕೆ ಕುಸಿದಿದೆ.
ಬೆಲೆ ಕುಸಿತಕ್ಕೂ ಮಿಗಿಲಾಗಿ ರೇಷ್ಮೆನೂಲಿಗೆ ಬೇಡಿಕೆಯೆ ಇಲ್ಲ. ಹಾಗಾಗಿಯೆ ಈ ಏರು ಪೇರಾಗುತ್ತಿದೆ ಎನ್ನುವುದು ರೇಷ್ಮೆ ಮಾರುಕಟ್ಟೆಯ ಪರಿಣಿತರ ಲೆಕ್ಕಾಚಾರ. ಮಾರುಕಟ್ಟೆಯಲ್ಲಿ ಹಣವೇ ಇಲ್ಲ. ಮಾರಿರುವ ರೇಷ್ಮೆಗೆ ಹಣದ ವಿವರದ ಪಟ್ಟಿ ಹಿಡಿದುಕೊಂಡು ಕೂರುವಂತಾಗಿದೆ. ಲಾಭವಿಲ್ಲದೆಯೂ ಮಾರಲು ಹೋದರೂ ಹಣ ಸಿಗುತ್ತಿಲ್ಲ ಎನ್ನುತ್ತಾರೆ ರೇಷ್ಮೆ ನೂಲು ಉತ್ಪಾದಕ ಸಮೀವುಲ್ಲ.
ಇಡೀ ದೇಶದಲ್ಲಿಯೆ ಅತಿ ಹೆಚ್ಚು ರೇಷ್ಮೆಗೂಡು ವಹಿವಾಟು ನಡೆಯುವ ಶಿಡ್ಲಘಟ್ಟದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ನಿತ್ಯವೂ ೪೫-೫೦ ಸಾವಿರ ಟನ್ನಷ್ಟು ರೇಷ್ಮೆಗೂಡಿನ ವಹಿವಾಟು ನಡೆಯುತ್ತದೆ. ತಾಲ್ಲೂಕಿನಲ್ಲಿ ದಿನವೂ ೬-೮ ಟನ್ನಷ್ಟು ರೇಷ್ಮೆನೂಲು ಉತ್ಪಾದನೆಯಾಗುತ್ತದೆ.ದೇಶದ ಪ್ರಮುಖ ಬಟ್ಟೆ ತಯಾರಕ ನಗರಗಳಿಗೆ ಶಿಡ್ಲಘಟ್ಟದಿಂದ ವಿವಿಧ ಗುಣಮಟ್ಟದ ರೇಷ್ಮೆನೂಲು ರಫ್ತು ಆಗುತ್ತದೆ.
ಮಾರುಕಟ್ಟೆ ವ್ಯತ್ಯಯ ಅಥವಾ ಕುಸಿತ ಕಂಡಾಗ ರೇಷ್ಮೆನೂಲು ಖರೀದಿಸುವವರು ಖರೀದಿ ನಿಲ್ಲಿಸಿಬಿಡುತ್ತಾರೆ. ಇದನ್ನೇ ನಂಬಿ ಗುಡಿ ಕೈಗಾರಿಕೆಯಂತೆ ನಡೆಸುವ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗಿದೆ. ಇಲ್ಲಿನ ರೀಲರುಗಳ ಕೈಯಲ್ಲಿ ಹಣ ಇಲ್ಲದಾಗಿದೆ. ಪರಿಣಾಮ ರೇಷ್ಮೆಗೂಡಿನ ಬೆಲೆಯೂ ಕುಸಿದಿದೆ. ಲಕ್ಷಾಂತರ ರೇಷ್ಮೆಬೆಳೆಗಾರರ ಹಾಗೂ ರೀಲರುಗಳ ಕುಟುಂಬಗಳು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ತೊಡಗಿಸಿಕೊಂಡ ಬಹುಕೋಟಿ ರೂಪಾಯಿಗಳ ವಹಿವಾಟಿನ ರೇಷ್ಮೆ ಉದ್ದಿಮೆ ಸಂಕಷ್ಟದಲ್ಲಿದೆ.
- Advertisement -
- Advertisement -
- Advertisement -
- Advertisement -