ತಾಲ್ಲೂಕಿನ ಗುಡಿಹಳ್ಳಿಯ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಶನಿವಾರ ನೆರವೇರಿಸಲಾಯಿತು. ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ೯ ನೇ ವರ್ಷದ ಬ್ರಹ್ಮ ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಿಂಗರಿಸಿ ವಿಶೇಷ ಪೂಜೆ, ಹೋಮ, ಹವನ, ಕಳಶ ಪೂಜೆ, ಗಣಪತಿ ಪೂಜೆ ನಡೆಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಉತ್ಸವ ಮೂರ್ತಿಯನ್ನು ಅಲಂಕೃತ ಹೂವಿನ ತೇರಿನಲ್ಲಿ ಪ್ರತಿಷ್ಠಾಪಿಸಿ ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಕರಡಿ ವೇಷ, ಗಾರುಡಿ ಗೊಂಬೆ, ತಮಟೆ, ನಾದಸ್ವರ, ವೀರಗಾಸೆ ಇನ್ನಿತರೆ ಜನಪದ ಕಲಾತಂಡಗಳು ರಥೋತ್ಸವಕ್ಕೆ ಕಳೆ ತಂದಿದ್ದವು.
ಬುರಗು ಬತಾಸಿನ ಅಂಗಡಿ, ಮಕ್ಕಳ ಆಟದ ಸಾಮಾನು, ಐಸ್‌ಕ್ರೀಂ, ಕೈ ಮೇಲೆ ಹಚ್ಚೆ ಹಾಕುವ, ಬಣ್ಣ ಬಣ್ಣದ ವಿವಿದ ಆಕಾರದ ಊಸರ ಬುಡ್ಡೆ (ಬಲೂನ್), ಜಡೆಕುಚ್ಚೆ, ಜಡೆ ಬಿಲ್ಲೆಯ ಅಂಗಡಿ, ಕಬ್ಬಿನ ರಸ, ಜಿಲೇಬಿ ಬಿಸಿ ಬಿಸಿ ಬೋಂಡ ಇನ್ನಿತರೆ ಹತ್ತಾರು ಅಂಗಡಿಗಳು ದೇವಾಲಯದ ಆಸು ಪಾಸಿನಲ್ಲಿ ತಲೆ ಎತ್ತಿದ್ದವು.
ರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಮಾಜಿ ಸದಸ್ಯೆ ಶಿವಲೀಲಾ ರಾಜಣ್ಣ, ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುಖಂಡರಾದ ಚನ್ನಕೃಷ್ಣಪ್ಪ, ಮುನಿವೆಂಕಟಸ್ವಾಮಿ, ಶ್ರೀರಾಮಪ್ಪ, ಬಚ್ಚರಾಯಪ್ಪ, ಜಿ.ಆರ್.ವೆಂಕಟರೆಡ್ಡಿ, ಚಂದ್ರನಾಥ್, ದೇವರಾಜ್, ಕೆಂಪಣ್ಣ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -