ಶ್ರದ್ಧೆ, ಬದ್ಧತೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಿಶ್ಚಿತ ಗುರಿಯಿದ್ದಲ್ಲಿ ಮಾತ್ರವೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿದ್ದು, ಈ ಎಲ್ಲಾ ಅಂಶಗಳನ್ನು ಜೀವನಪರ್ಯಂತ ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಇನ್ಫೊಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ತಿಳಿಸಿದರು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಪಟ್ಟಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಸುಮಾರು 10 ನಿಮಿಷಗಳ ಕಾಲ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ‘ನನ್ನ ಯಶಸ್ವಿ ಜೀವನಕ್ಕೆ ಈ ಎಲ್ಲಾ ಅಂಶಗಳೇ ಪ್ರಮುಖ ಕಾರಣ’ ಎಂದರು.
ವಿದ್ಯಾರ್ಥಿನಿ ಸ್ನೇಹಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಶಿಡ್ಲಘಟ್ಟದ ಪುಟ್ಟ ಗ್ರಾಮದಿಂದ ಆರಂಭಗೊಂಡ ನನ್ನ ಪಯಣ ಈಗ ಅಂತರ್ರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಯಾವುದೇ ಪ್ರದೇಶ ಅಥವಾ ಜಾತಿಗೆ ಸೇರಿದ್ದರೂ ಯಾರು ಬೇಕಾದರೂ ವಿಶಿಷ್ಟ ಸಾಧನೆ ಮಾಡಬಹುದು. ದೃಢವಾದ ಗುರಿಯಿರಬೇಕು ಎಂದರು.
ವಿದ್ಯಾರ್ಥಿ ಸ್ವರೂಪ್ ಪ್ರಶ್ನೆಗೆ ಪ್ರತಿಕಿ್ರಯಿಸಿದ ಅವರು, ಇನ್ಫೊಸಿಸ್ ಸಂಸ್ಥೆ ಕಟ್ಟಲು ಅಗತ್ಯವಿದ್ದ ತಂಡವನ್ನು ಕಟ್ಟುವಾಗ ಜಾತಿ, ಧರ್ಮ, ಮತ ಮುಂತಾದವು ಕಡೆ ಗಮನಹರಿಸಲಿಲ್ಲ. ಕೆಲಸ ಮಾಡಲು ಉತ್ಸಾಹಿ ಸಹೋದ್ಯೋಗಿಗಳನ್ನು ಆಯ್ಕೆ ಮಾಡಿಕೊಂಡೆ. ಅವರಲ್ಲಿ ಒಬ್ಬರು ತಂತ್ರಜ್ಞಾನ ಪರಿಣತಿ ಗಳಿಸಿದ್ದರೆ, ಮತ್ತೊಬ್ಬರು ಹಣಕಾಸು ವಿಚಾರದಲ್ಲಿ ತಜ್ಞರಾಗಿದ್ದರು. ವಿಜ್ಞಾನ, ತಂತ್ರಜ್ಞಾನ ಮತ್ತು ಕೌಶಲ್ಯದ ಜ್ಞಾನಕ್ಕೆ ಪ್ರಥಮ ಆದ್ಯತೆ ನೀಡಿದೆ. ಸಂಸ್ಥೆಗೆ ಇವೆಲ್ಲವೂ ಬಲ ತುಂಬಿದವು ಎಂದರು.
ವಿದ್ಯಾರ್ಥಿನಿ ಚಂದನಾ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಅವರು, ದೇಶದಿಂದ ಭ್ರಷ್ಟಾಚಾರ ತೊಲಗಿಸಲು ಸಾರ್ವಜನಿಕರು ದೃಢವಾದ ನಿಲುವು ತಳೆಯಬೇಕು. ಲಂಚ ತೆಗೆದುಕೊಳ್ಳದೇ ಮತ್ತು ನೀಡದೇ ಕೆಲಸ ಮಾಡಿಸಿಕೊಳ್ಳುವ, ಪ್ರಾಮಾಣಿಕತೆಯಿಂದ ದುಡಿಯುವ ಮನಸ್ಸಿದ್ದಲ್ಲಿ ಭ್ರಷ್ಟಾಚಾರ ನಿವಾರಿಸಬಹುದು ಎಂದರು.
ದೇಶ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗಲು ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬೇಕು. ಉನ್ನತ ಶಿಕ್ಷಣವಿದ್ದಲ್ಲಿ ಮತ್ತು ಹೆಚ್ಚಿನ ಸಂಶೋಧನೆ ಮಾಡಿದ್ದಲ್ಲಿ ಯಶಸ್ಸಿನ ಪಥದಲ್ಲಿ ಖಂಡಿತವಾಗಿಯೂ ನಿರಾತಂಕವಾಗಿ ಮುಂದುವರೆಯಬಹುದು. ಸಂಶಯಪಡುವ ಅಗತ್ಯವೇ ಇಲ್ಲ ಎಂದರು. ಎನ್.ಆರ್.ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಮತ್ತು ಶಾಸಕ ಎಂ.ರಾಜಣ್ಣ ಉಪಸ್ಥಿತರಿದ್ದರು.