ದೇಶದ ಏಳಿಗೆಯು ಯುವಜನತೆಯ ಮೇಲೆ ಅವಲಂಬಿಸಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು. ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ 66ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ ಅಖಂಡ ಭಾರತ ದೇಶಕ್ಕೆ ಪ್ರಪಂಚದ ಅತ್ಯಂತ ಬೃಹದಾಕಾರದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಂಡ ವ್ಯವಸ್ಥೆಯಲ್ಲಿ ಜೀವನ ಮಾಡುತ್ತಿರುವ ಪ್ರತಿಯೊಬ್ಬ ನಾಗರೀಕರು ಸಂವಿಧಾನದ ಆಶಯಗಳಿಗೆ ಕಟಿಬಧ್ದರಾಗಿ ಜೀವಿಸಬೇಕಾದಂತಹ ಅನಿವಾರ್ಯತೆ ಇದೆ. ಮೂಲಭೂತ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಾಗಿದೆ ಯುವಶಕ್ತಿಯ ಮುಂದೆ ವ್ಯವಸ್ಥಿತವಾದ ಸಮಸ್ಯೆಗಳು ಎದುರಾಗುತ್ತಿವೆ, ಭಯೋತ್ಪಾದನೆ, ಕುಡಿಯುವ ನೀರಿನ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ, ಭಾರತಾಂಬೆಯ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಬೇಕು, ಗಡಿಗಳ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು, ಶಾಲಾ ಮಕ್ಕಳು ಅಕ್ಷರಸ್ಥರಾಗಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಬೇಕು, ಅನಕ್ಷರತೆ ತೊಲಗಬೇಕು, ದೇಶವನ್ನು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ ಮತ್ತು ಪ್ರಜಾಪ್ರಭುತ್ವ ಗಣತಂತ್ರವನ್ನಾಗಿ ಮಾಡಲು ಎಲ್ಲಾ ಪ್ರಜೆಗಳು ದೃಢ ಸಂಕಲ್ಪ ಮಾಡಬೇಕಾಗಿದೆ, ದೇಶದಲ್ಲಿನ ಜನತೆಯನ್ನು ಭಯಬೀತಗೊಳಿಸುವಂತಹ ಭಯೋತ್ಪಾದನೆಯನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರ ನೀಡಬೇಕು ಎಂದರು.
ದ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ, ನ್ಯಾಯ ಸಮ್ಮತವಾದ ಚಿಂತನೆ ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಮತ್ತು ಆರಾಧನೆಗಳಿಗೆ ಸ್ವಾತಂತ್ರ್ಯವನ್ನು ಹೊಂದಲು ಇಷ್ಟಪಡುವಂತಹ ಸ್ಥಾನಮಾನಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದರೊಂದಿಗೆ ದೇಶದಲ್ಲಿ ಸಮಾನತೆ, ಬ್ರಾತೃತ್ವ, ಪರಸ್ಪರ ಪ್ರೀತಿ ಆದರಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ, ರೈತರ ಅಭಿವೃದ್ದಿಗಾಗಿ ಕೃಷಿ ಭಾಗ್ಯ, ಹಸಿವು ಮುಕ್ತರಾಜ್ಯ, ನಾಡಿನ ಮಕ್ಕಳ ಅಪೌಷ್ಟಿಕತೆ ನಿವಾರಣೆ, ದುರ್ಬಲ ವರ್ಗದ ಜನರ ಅಭಿವೃದ್ದಿಯು ಅವಶ್ಯಕತೆಯಿದೆ ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ನಗರಸಭಾ ಅಧ್ಯಕ್ಷೆ ಮುಷ್ಟರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುರೇಂದ್ರಗೌಡ, ಇ.ಒ.ಗಣಪತಿಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸಮೂರ್ತಿ, ಸಿ.ಡಿ.ಪಿ.ಓ. ಲಕ್ಷ್ಮೀದೇವಮ್ಮ, ಎಇಇ ಶಿವಾನಂದ, ಅರಣ್ಯಾಧಿಕಾರಿ ಸುಬ್ಬರಾವ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಮುಂತಾದವರು ಹಾಜರಿದ್ದರು.