ನಾಗರಿಕತೆಯ ಹೆಸರಿನಲ್ಲಿ ನೆಲ-ಜಲ ಹಾಗು ದೇಶದ ಸಂಸ್ಕೃತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಇಂದಿನ ಪೀಳಿಗೆ ವಿನಾಶದ ಅಂಚಿಗೆ ಹೋಗುತ್ತಿರುವುದು ವಿಷಾಧನೀಯ ಸಂಗತಿ ಎಂದು ರಂಗ ಕಾಲವಿದ ಡಾ.ದೇವನಹಳ್ಳಿ ದೇವರಾಜ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ೬೯ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪರಿವರ್ತನಾ ಕಲಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಪೂರ್ವಜರು ಜತನದಿಂದ ಕಾಪಾಡಿಕೊಂಡು ಬಂದ ನೈಸರ್ಗಿಕ ಸಂಪತ್ತನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮಮೇಲಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಎಂ.ಜಯಲಕ್ಷ್ಮಮ್ಮ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಸವಲತ್ತನ್ನು ನೀಡುತ್ತಾ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದರೂ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಿರುವುದು ಶೋಚನೀಯ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಅಂತರ್ಜಲ ಕುಸಿತ, ನೀರಿನ ಸದ್ಭಳಕೆ, ಶೌಚಾಲಯ ನಿರ್ಮಾಣ, ಶುಚಿತ್ವ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಸಾರವುಳ್ಳ ಮೂಕಾಭಿನಯ ನಾಟಕ ಮತ್ತು ಅಪ್ಪನ ಅಂತಸ್ತು ಮಗನ ಮರ್ಯಾದೆ ಎಂಬ ಹಾಸ್ಯ ನಾಟಕ ನೋಡುಗರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಗಣ್ಯರಿಂದ ದಿವಂಗತ ಶಿಕ್ಷಕ ಧರ್ಮಪ್ರಕಾಶ್ ಅವರ ಸ್ಮರಣಾರ್ಥ ಕಾಣಿಕೆ ಸೇರಿದಂತೆ ಶಾಲಾ ಮಕ್ಕಳಿಗೆ ರಂಗ ತರಬೇತಿಯ ಪ್ರಶಸ್ತಿ ಪತ್ರ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ನಾಗಭೂಷಣ್, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಶಿಕಲಾ ನಟರಾಜ್, ಸದಸ್ಯ ನಾಗರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ, ಸದಸ್ಯ ಪ್ರಕಾಶ್, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -