’ಶಿಡ್ಲಘಟ್ಟದ ದೇವರು ಹಿಂದುಮುಂದು’ ಎಂಬ ಗಾದೆ ಮಾತಿಗೆ ಕಾರಣವಾದ ಪಟ್ಟಣದ ಪುರಾತನ ಪ್ರಸಿದ್ಧ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಮುಜುರಾಯಿ ಇಲಾಖೆಗೆ ಸೇರಿರುವ ದೇವಾಲಯದಲ್ಲಿ ಬೆಳಗಿನಿಂದಲೇ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥವನ್ನು ಎಳೆಯಲು ಕಾತುರದಿಂದ ಕಾಯುತ್ತಿದ್ದ ಭಕ್ತಾಧಿಗಳು ಚಾಲನೆ ಸಿಗುತ್ತಿದ್ದಂತೆ ಉದ್ದವಾದ ಹಗ್ಗವನ್ನು ಹಿಡಿದು ರಥವನ್ನು ಎಳೆದು ಸಂಭ್ರಮಿಸಿದರು. ತಮಟೆವಾದನ, ಮಂಗಳವಾದ್ಯಗಳ ನಡುವೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಮಹಿಳೆಯರು ಕಾಯಿ ಒಡೆದು ಪೂಜಿಸಿ ಆರತಿ ಬೆಳಗಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಹೆಸರುಬೇಳೆಯನ್ನು ಭಕ್ತರಿಗೆ ಹಂಚಿದರು. ದೇವಾಲಯದಲ್ಲಿ ಪ್ರಸಾದ ವಿನಿಯೋಗಿಸಲಾಯಿತು. ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಋತ್ವಿಜರಾದ ಕೆ.ವಿ.ಸುಬ್ರಮಣ್ಯಶಾಸ್ತ್ರಿ, ಎಸ್.ಸತ್ಯನಾರಾಯಣರಾವ್, ಎನ್.ಆರ್.ಶ್ರೀನಾಥ್, ದೇವಾಲಯ ಸಮಿತಿ ಸಂಚಾಲಕ ರೂಪಸಿ ರಮೇಶ್, ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ನ ಬಿ.ಪಿ.ರಾಘವೇಂದ್ರ, ಪುರಸಭಾ ಸದಸ್ಯ ಬಾಲಕೃಷ್ಣ, ಬಂಗಾರು ಶ್ರೀನಿವಾಸ್, ಹರಿ, ಮನೋಜ್, ವರದರಾಜ್, ಗೋಪಾಲಪ್ಪ, ಶ್ರೀನಾಥ್, ಅನಿಲ್, ದಾಶರಥಿ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.