ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಜೂನ್ ೧೨ರ ಶುಕ್ರವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಚರಣೆ ಮಾಡಲಿದ್ದು ಅಂದು ಕನಿಷ್ಠ ೨೦೦ ಯೂನಿಟ್ಗಳಷ್ಟು ರಕ್ತ ಸಂಗ್ರಹ ಮಾಡಲು ಉದ್ದೇಶಿಸಿಸಲಾಗಿದೆ ಎಂದು ರೆಡ್ಕ್ರಾಸ್ ಸೊಸೈಟಿಯ ತಾಲೂಕು ಅಧ್ಯಕ್ಷ ಹಾಗೂ ತಹಸೀಲ್ದಾರರೂ ಆದ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೆಡ್ಕ್ರಾಸ್ ಸಮಿತಿ, ವಿವಿಧ ಇಲಾಖೆಗಳ ಅಧಿಕಾರಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಮಟ್ಟದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಇದೆ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ಜಿಲ್ಲೆಯ ಒಂದೊಂದು ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದ್ದು ಅದರಂತೆ ಈ ಬಾರಿ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ, ಶಿಡ್ಲಘಟ್ಟದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಘಟಕ ಸೇರಿದಂತೆ ವಿವಿದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ ೯.೩೦ಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಕನಿಷ್ಠ ೨೦೦ ಯೂನಿಟ್ನಷ್ಟು ರಕ್ತ ಸಂಗ್ರಹ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ. ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಯುವಜನರು, ವಿದ್ಯಾರ್ಥಿ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ರಕ್ತದಾನ ಮಾಡುವ ಸರ್ಕಾರಿ ನೌಕರರಿಗೆ ವಿಶೇಷ ಕೋಟಾದಡಿ ಒಒಡಿಯ ಸೌಲಭ್ಯವನ್ನು ನೀಡಲಿದ್ದು ಅದರ ಸದುಪಯೋಗಪಡೆದುಕೊಳ್ಳುವಂತೆ ಸರ್ಕಾರಿ ನೌಕರರಲ್ಲಿ ಮನವಿ ಮಾಡಿದರು. ಹಾಗೆಯೆ ರಕ್ತದಾನ ಮಾಡುವ ಇತರರಿಗೆ ಅಭಿನಂದನಾ ಪತ್ರವನ್ನು ನೀಡಲಾಗುವುದು ಎಂದು ವಿವರಿಸಿದರು.
ಇಡೀ ರಾಜ್ಯದಲ್ಲಿಯೆ ರಕ್ತ ಸಂಗ್ರಹದಲ್ಲಿ ನಮ್ಮ ಜಿಲ್ಲೆಯ ರೆಡ್ಕ್ರಾಸ್ ಘಟಕ ಮೊದಲ ಸ್ಥಾನದಲ್ಲಿದ್ದು ಇತ್ತೀಚೆಗೆ ರಾಜ್ಯಪಾಲರು ನಮ್ಮ ಜಿಲ್ಲಾಧಿಕಾರಿಗಳಿಗೆ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದ್ದು ಅದು ಇಡೀ ಜಿಲ್ಲೆಯ ಜನತೆಗೆ, ಅಧಿಕಾರಿ ವರ್ಗಕ್ಕೆ, ಸಂಘ ಸಂಸ್ಥೆಗಳಿಗೆ, ರಕ್ತದಾನಿಗಳಿಗೆ ಸಲ್ಲುತ್ತದೆ ಎಂದರು.
ರೆಡ್ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಎನ್.ಕೆ.ಗುರುರಾಜ್, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಸಿಡಿಪಿಒ ಲಕ್ಷ್ಮಿದೇವಮ್ಮ, ಆರೋಗ್ಯ ಇಲಾಖೆಯ ಶಮೀವುಲ್ಲಾ, ಗಂಗಾಧರ್, ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ನೀಲಮ್ಮ, ಮಮತ, ಸಿಆರ್ಪಿ ಲಕ್ಷ್ಮಿನರಸಿಂಹಗೌಡ, ಸಿಲ್ಸಿಲಾ ಇನ್ನಿತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
- Advertisement -
- Advertisement -
- Advertisement -
- Advertisement -