ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ” ದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಮಾನಸಿಕ ರಾಗ, ದ್ವೇಷ, ಅಹಂಕಾರ ಮುಂತಾದ ಕ್ಷುಲ್ಲಕ ಕಾರಣಗಳಿಂದಾಗಿಯೇ ಅನೇಕರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದರಿಂದಾಗಿ ಅವರ ಆರೋಗ್ಯ, ಹಣ, ಸಮಯ ವ್ಯರ್ಥವಾಗುತ್ತದೆ. ಮಾನಸಿಕ ಪ್ರಜ್ಞೆಯನ್ನು ಆತ್ಮಾವಲೋಕನಾ ಕ್ರಿಯೆಯೊಂದಿಗೆ, ಹೃದಯ ವೈಶಾಲ್ಯದಿಂದ ಬೆಳೆಸಿಕೊಳ್ಳುವ ಅತ್ಯಗತ್ಯವಿದೆ. ಮಾನಸಿಕ ಅಸ್ವಸ್ಥತೆಗೆ ಈಗ ವೈದ್ಯಕೀಯ ಚಿಕಿತ್ಸೆಗಳು ಸುಧಾರಣಾ ಕ್ರಮಗಳು ಇರುವುದನ್ನು ಮನಗಾಣಬೇಕು ಎಂದು ಅವರು ತಿಳಿಸಿದರು.
ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ.ಪಚ್ಚಾಪುರೆ ಮಾತನಾಡಿ, ಅಮೂಲ್ಯವಾದ ಬದುಕನ್ನು ಯಾವ ಯಾವದೋ ಕಾರಣಕ್ಕಾಗಿ ಕಳೆದುಕೊಳ್ಳುವ ಪ್ರವೃತ್ತಿ ದಿನೇದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಜೀವಿಯ ಹುಟ್ಟು ಆಕಸ್ಮಿಕ ಹಾಗೂ ಸಾವು ನಿಶ್ಚಿತ. ಯಾವೊಬ್ಬ ಮನುಷ್ಯನೂ ತನ್ನ ಆಯ್ಕೆಯಂತೆ ಜನಿಸಲು ಸಾಧ್ಯವಿಲ್ಲ. ಸಾವು ನಿಶ್ಚಿತವಾದರೂ ಅದನ್ನು ನಾವೇ ಆಹ್ವಾನಿಸುವುದು ಸರಿಯಲ್ಲ ಎಂದರು.
ಆಶಾಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ”ದ ಬಗ್ಗೆ ಅರಿವು ಮೂಡಿಸುವ ಜಾಥಾ ನಡೆಸಿದರು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲ ವಿಜಯಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಆರೋಗ್ಯ ಇಲಾಖೆಯ ಮುನಿರತ್ನಮ್ಮ, ಗೀತಾ, ಲೋಕೇಶ್, ವಿಜಯಮ್ಮ ಹಾಜರಿದ್ದರು.
- Advertisement -
- Advertisement -
- Advertisement -
- Advertisement -