ಜಮೀನಿನ ಸರ್ವೆ ಮಾಡಿಸುವ ಪ್ರಕರಣವೊಂದು ಕಳೆದ ನಾಲ್ಕು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಲೋಕಾಯುಕ್ತ ಎಸ್ಪಿ ಡಿ.ಎಸ್.ಸಿದ್ದೇಗೌಡರವರು ಭೂಮಾಪನ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಲೋಕಾಯುಕ್ತರಿಂದ ಸರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳ ಹಿಂದಿನ ಕಡತವೂ ಬಾಕಿ ಇರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಚೀಮನಹಳ್ಳಿಯ ಮುನಿರಾಜು ತಮಗೆ ಸೇರಿದ ಸರ್ವೆ ನಂಬರ್ ೫೭ ಪಿ ೧ರ ಪೈಕಿ ೧.೨೦ಎಕರೆಯನ್ನು ದುರಸ್ಥಿ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ನ್ಯಾಯಾಲಯದಿಂದಲೂ ಆದೇಶವಾಗಿದೆ. ಆದರೆ ಅದಕ್ಕೆ ಸಂಬಂಧಿಸಿದ ಕಡತವನ್ನು ತಾಲ್ಲೂಕು ಕಚೇರಿಯಲ್ಲಿ ಉದ್ದೇಶಪೂರ್ವಕವಾಗಿಯೆ ಕಳವು ಮಾಡಿ ಕಡತ ನಾಪತ್ತೆ ಎಂದು ಕಚೇರಿಗೆ ವೃತಾ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ಹೊಸಪೇಟೆಯ ಎಚ್.ಎಂ.ಮುನಿಕೃಷ್ಣಪ್ಪ ತಮ್ಮ ಹಿರಿಯರಿಗೆ ನೀರಗಂಟಿ ಇನಾಮ್ತಿಯಾಗಿ ೧೯.೩೩ ಎಕರೆ ಜಮೀನು ಮಂಜೂರಾಗಿದ್ದು ಅದು ೧೩ ಮಂದಿಗೆ ಸೇರಬೇಕು. ಸದರಿ ಜಮೀನಿನ ಎಲ್ಲ ದಾಖಲೆಗಳು ಲಭ್ಯವಿದ್ದರೂ ಪಹಣಿಯನ್ನು ಯಾರ್ಯಾರಿಗೆ ಎಷ್ಟೆಷ್ಟು ಜಮೀನು ಎಂಬುದನ್ನು ನಮೂದಿಸಬೇಕೆಂದು ಕೋರ್ಟು ಕಚೇರಿ, ತಹಸೀಲ್ದಾರ್ ಕಚೇರಿ ಅಂತ ಓಡಾಡುತ್ತಿದ್ದರೂ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸ ಆಗುತ್ತಿಲ್ಲ ಎಂದು ದೂರಿದರು.
ಲೋಕಾಯುಕ್ತ ಎಸ್ಪಿ ಡಿ.ಎಸ್.ಸಿದ್ದೇಗೌಡ, ಸಿಪಿಐ ಮಂಜೇಗೌಡರವರು ಅಹವಾಲುಗಳನ್ನು ವಿಲೇವಾರಿ ಮಾಡಿದರು. ಗ್ರೇಡ್-೨ ತಹಸೀಲ್ದಾರ್ ನಾಯಕ್, ಪುರಠಾಣೆಯ ಎಸ್ಐ ಪುರುಷೋತ್ತಮ್, ಕೃಷಿ ಸಹಾಯಕ ನಿರ್ದೆಶಕ ದೇವೇಗೌಡ, ಬಿಸಿಎಂ ಇಲಾಖೆಯ ಶಂಕರ್ ಇನ್ನಿತರರು ಭಾಗವಹಿಸಿದ್ದರು.