Home News ಲಂಡನ್‌ ನಿವಾಸಿಗರಿಗೆ ನೆರವು ನೀಡಿ ಮಾನವೀಯತೆ ಮೆರೆದ ಶಿಡ್ಲಘಟ್ಟದ ಜನತೆ

ಲಂಡನ್‌ ನಿವಾಸಿಗರಿಗೆ ನೆರವು ನೀಡಿ ಮಾನವೀಯತೆ ಮೆರೆದ ಶಿಡ್ಲಘಟ್ಟದ ಜನತೆ

0

ಪ್ರವಾಸಕ್ಕಾಗಿ ಆಗಮಿಸಿ ಅಪಘಾತಕ್ಕೀಡಾಗಿದ್ದ ಲಂಡನ್ ನಿವಾಸಿಗರಿಗೆ ಶಿಡ್ಲಘಟ್ಟದ ಮಾನವೀಯ ಸಹಾಯ ಲಭಿಸಿದೆ.
ಫ್ರೆಡ್, ಟಾಮ್‌ ಮತ್ತು ಫೀಬಿ ಲಂಡನ್‌ ನಿಂದ ಭಾರತದ ಕೇರಳ ರಾಜ್ಯದ ಪ್ರವಾಸ ಮುಗಿಸಿಕೊಂಡು ಆಟೋ ಬಾಡಿಗೆಗೆ ಪಡೆದು ರಾಜ್ಯದ ಮೈಸೂರು ಮತ್ತು ಬೆಂಗಳೂರನ್ನು ನೋಡಿಕೊಂಡು ಶಿಡ್ಲಘಟ್ಟದ ಮೂಲಕ ತಿರುಪತಿಯ ಕಡೆ ಹೊರಟಿದ್ದರು. ಗುರುವಾರ ಬೆಳಿಗ್ಗೆ ತಾಲ್ಲೂಕಿನ ವೈ.ಹುಣಸೇನಹಳ್ಳಿ ಬಳಿ ಇವರ ಆಟೋವನ್ನು ಅಪರಿಚಿತ ವಾಹನ ಗುದ್ದಿದ ಪರಿಣಾಮ ಆಟೋ ಉರುಳಿಬಿದ್ದಿದೆ.
ಕಂಗಾಲಾಗಿ ರಸ್ತೆಯ ಬದಿ ಕುಳಿತಿದ್ದ ಇವರನ್ನು ಅದೇ ದಾರಿಯಲ್ಲಿ ಬರುತ್ತಿದ್ದ ಎಬಿವಿಪಿ ಮಂಜುನಾಥ್‌ ಗಮನಿಸಿ ಕಾರಿನಲ್ಲಿ ಕರೆತಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಮ್ಮ ಅವರ ಮನೆಯಲ್ಲಿ ಬಿಟ್ಟಿದ್ದಾರೆ. ಮಂಜುಳಮ್ಮ ಅವರು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಟಾಮ್‌ ನ ತಲೆಗೆ ಆಗಿದ್ದ ಗಾಯಕ್ಕೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ಫ್ರೆಡ್‌ ಮತ್ತು ಫೀಬಿ ಅವರಿಗೆ ಆಗಿದ್ದ ಗಾಯಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ನಂತರ ಅವರ ಆಟೋವನ್ನು ಗ್ಯಾರೇಜಿಗೆ ತಂದು ರಿಪೇರಿ ಮಾಡಿಸಿ ಸಹಕರಿಸಿದ್ದಾರೆ.
‘ಬೆಳಿಗ್ಗೆ ನಮ್ಮ ಮನೆಗೆ ಮಂಜು ಗಾಯಗೊಂಡ ಇವರನ್ನು ಕರೆತಂದಾಗ ಬಹಳ ಗಾಬರಿಗೊಂಡಿದ್ದರು. ತಕ್ಷಣ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆ. ಆಸ್ಪತ್ರೆಯವರು ಹಣವನ್ನು ಪಡೆಯದೆ ಚಿಕಿತ್ಸೆ ನೀಡಿದರು. ನಮ್ಮ ಅಡುಗೆಯಾದ ಉಪ್ಪಿಟ್ಟು, ರೊಟ್ಟಿ, ಬೆಂಡೇಕಾಯಿ ಫ್ರೈ, ಅಪ್ಪಳ, ಪಾಯಸ, ಬಜ್ಜಿ, ನುಗ್ಗೇಕಾಯಿ ಸಾರು, ಅನ್ನ ಇಷ್ಟಪಟ್ಟು ತಿಂದರು. ವಿದೇಶಿ ಪ್ರವಾಸಿಗರು ನಮ್ಮ ದೇಶದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ತಿಳಿಸಬೇಕು. ನಮ್ಮ ಭಾರತದ ಅನನ್ಯತೆಯನ್ನು ವೀಕ್ಷಿಸಿ ಸುಂದರ ನೆನಪುಗಳನ್ನು ಹೊತ್ತೊಯ್ಯಲು ಬರುವ ವಿದೇಶಿಯರಿಗೆ ನಮ್ಮ ಮಾನವೀಯ ಮುಖವೂ ಪರಿಚಯವಾಗಿ ಇನ್ನಷ್ಟು ಪ್ರವಾಸಿಗರು ಭಾರತಕ್ಕೆ ಬರುವಂತಾಗಲಿ’ ಎನ್ನುತ್ತಾರೆ ಮಂಜುಳಮ್ಮ.
‘ನಾವು ಭಾರತವನ್ನು ಆಟೋವನ್ನು ಚಾಲನೆ ಮಾಡಿಕೊಂಡು ನೋಡುತ್ತಾ ಹೋಗಬೇಕು ಎಂಬ ಆಸೆಯಿಂದ ಕೇರಳದಿಂದ ಹೊರಟೆವು. ದುರದೃಷ್ಟವಶಾತ್‌ ಅಪಘಾತವಾಯಿತು. ಆದರೆ ಶಿಡ್ಲಘಟ್ಟದವರು ನಮಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡಿ ನಮ್ಮನ್ನು ಕಾಪಾಡಿದ್ದಾರೆ. ನಾವು ನಿಮಗೆ ಚಿರ ಋಣಿಗಳು’ ಎಂದು ಫ್ರೆಡ್‌ ಹೇಳಿದರು.