ಜಂತುಹುಳುವಿನಿಂದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಹಸಿವು ಅಗದಿರುವುದು. ನಿಶ್ಯಕ್ತಿ, ಹೊಟ್ಟೆ ನೋವು, ವಾಂತಿ ಭೇದಿ, ಮಲದಲ್ಲಿ ರಕ್ತ ಕಾಣಿಸಿಕೊಳ್ಳುವ ಸಮಸ್ಯೆಗಳು ಕಂಡು ಬರುತ್ತವೆ. ಮಾತ್ರೆಯನ್ನು ನುಂಗುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ‘ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ದ ಅಂಗವಾಗಿ ಜಂತು ಹುಳು ನಿವಾರಣೆಯ ಅಲ್ಬಂಡಜೋಲ್ ಮಾತ್ರೆಗಳನ್ನು ಮಕ್ಕಳಿಗೆ ನುಂಗಿಸಿ ಅವರು ಮಾತನಾಡಿದರು.
ಜಂತುಹುಳು, ಕೊಕ್ಕೆಹುಳು, ಲಾಡಿಹುಳು, ಮುಂತಾದವುಗಳು ಮಕ್ಕಳ ಹೊಟ್ಟೆ ಸೇರಿದಾಗ ರಕ್ತಹೀನತೆ, ಅಪೌಷ್ಠಿಕತೆ ಮುಂತಾದ ರೋಗಕ್ಕೆ ಮಕ್ಕಳು ಸುಲಭವಾಗಿ ತುತ್ತಾಗುತ್ತಾರೆ ಇದರಿಂದಾಗಿ ಮಕ್ಕಳ ಕಲಿಕಾ ಸಾಮರ್ಥ್ಯ ಕಡಿಮೆ ಆಗುತ್ತದೆ. ಇಂತಹ ರೋಗಗಳು ಬಾರದಂತೆ ಮಕ್ಕಳು ಜಾಗೃತೆ ವಹಿಸಬೇಕು. ಜಂತುಹುಳು ಆಗದಂತೆ ಪ್ರತಿಯೊಬ್ಬರು ಶುಚಿತ್ವ ವಹಿಸಬೇಕು, ಉತ್ತಮ ಆಹಾರ ಮತ್ತು ಶುದ್ಧವಾದ ನೀರನ್ನು ಸೇವಿಸಬೇಕು ಹಾಗೂ ಆರೋಗ್ಯ ಇಲಾಖೆ ನೀಡಿದ ಮಾತ್ರೆಗಳನ್ನು ಸೇವಿಸಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕ ಚಾಂದ್ಪಾಷ, ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.