‘ಅಸ್ಥವ್ಯಸ್ಥಗೊಂಡ ಕಚೇರಿ. ಕಚೇರಿಯ ಟೇಬಲಿನ ಮೇಲೆಯೇ ರಗ್ಗು ಹೊದ್ದು ಅವ್ಯವಸ್ಥೆಯಾಗಿ ಮದ್ಯ ಸೇವಿಸಿ ಬಿದ್ದಿದ್ದ ಅಧಿಕಾರಿ’ ಇದು ಮಂಗಳವಾರ ಮುಂಜಾನೆ ನಗರಸಭೆಯ ಅಧ್ಯಕ್ಷರು ಮತ್ತು ಸದಸ್ಯರಿಗೆ ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಕಂಡು ಬಂದ ದೃಶ್ಯ.
ನಗರದ ರೈಲ್ವೆ ನಿಲ್ದಾಣದಲ್ಲಿ ಹಲವಾರು ಸಮಸ್ಯೆಗಳಿವೆ. ಸುತ್ತ ಮುತ್ತ ಸ್ವಚ್ಛತೆಯ ಅವಶ್ಯಕತೆಯಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಭೇಟಿ ನೀಡಿದ ಜನಪ್ರತಿನಿಧಿಗಳಿಗೆ ಈ ವಿಚಿತ್ರ ದೃಶ್ಯದಿಂದ ಮುಜುಗರವುಂಟಾಯಿತು.
‘ನಗರದ ಆಸುಪಾಸಿನಲ್ಲಿರುವ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ಹೂಳು ತುಂಬಿಕೊಂಡು ನೀರು ಹರಿಯದಂತಾಗಿದೆ. ನೀರು ನಿಲ್ಲುವ ಕಾರಣ ಡಾಂಬರು ಕಿತ್ತು ಬಂದು ಕಬ್ಬಿಣದ ಸರಳುಗಳು ಹೊರಕ್ಕೆ ಬಂದಿವೆ. ಪ್ರಯಾಣಿಕರಿಗೆ ಸಾಕಷ್ಟು ತೊಂದರೆಗಳಿವೆ. ಅವರೆಲ್ಲರೂ ಆಯಾ ಭಾಗದ ನಗರಸಭೆಯ ಸದಸ್ಯರಿಗೆ ಶಾಪ ಹಾಕುತ್ತಾರೆ. ಆದರೆ ನಾವು ಅವನ್ನು ಮುಟ್ಟುವಂತಿಲ್ಲ. ಅವೆಲ್ಲ ರೈಲ್ವೆ ಇಲಾಖೆಗೆ ಸಂಬಂಧಿಸಿವೆ. ಇದನ್ನು ವಿಚಾರಿಸಲು ರೈಲು ನಿಲ್ದಾಣಕ್ಕೆ ಬಂದರೆ ಅಧಿಕಾರಿಯು ಮದ್ಯ ಸೇವಿಸಿ ಪರಿಜ್ಞಾನವಿಲ್ಲದೆ ಕಚೇರಿಯಲ್ಲಿ ಬಿದ್ದಿದ್ದಾರೆ. ಬೆಳಿಗ್ಗೆ 10.30 ಆಗಿದ್ದರೂ ನಾವು ಎಬ್ಬಿಸಿದರೂ ಮಾತನಾಡುವ ಸ್ಥಿತಿಯಲ್ಲಿ ಅವರಿರಲಿಲ್ಲ. ಸರ್ಕಾರಿ ಸಂಬಳ ಪಡೆಯುವ ಇವರು ಈ ರೀತಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬೇಸರವಾಯಿತು’ ಎಂದು ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ ತಿಳಿಸಿದರು.
‘ರೈಲ್ವೆ ಹಳಿಗಳು, ಪ್ಲಾಟ್‌ಫಾರಮ್ ಮೇಲೆಲ್ಲಾ ಗಿಡಗಳು ಬೆಳೆದಿವೆ. ಮೂಲಭೂತ ಸೌಕರ್ಯಗಳಿಲ್ಲ. ಪ್ಲಾಟ್‌ಫಾರಂ ಸುತ್ತ ಕಸಕಡ್ಡಿ ಹೇರಳವಾಗಿವೆ. ರೈಲ್ವೆ ನಿಲ್ದಾಣಕ್ಕೆ ಯಾರು ಬೇಕಾದರೂ ಪ್ಲಾಟ್‌ಫಾರಂ ಟಿಕೇಟಿಲ್ಲದೆ ಹೋಗಿ ಬರುವ ಸ್ಥಿತಿಯಿದೆ. ಫ್ಲೈ ಓವರ್ ಹತ್ತಲು ಹೋಗುವೆಡೆ ಗಿಡಗಂಟೆಗಳು ಬೆಳೆದಿವೆ. ಸ್ವಚ್ಛತೆಯಿಲ್ಲ. ನಗರದಲ್ಲಿ ಎಲ್ಲಿ ಸ್ವಚ್ಛತೆಯಿಲ್ಲದಿದ್ದರೂ ಜನ ಜನಪ್ರತಿನಿಧಿಗಳನ್ನೇ ದೂರುತ್ತಾರೆ. ರೈಲ್ವೆ ಅಧಿಕಾರಿಯನ್ನು ಈ ಬಗ್ಗೆ ಮಾತನಾಡಲು ಬಂದರೆ ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ. ಅವರ ವಿರುದ್ಧ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಘವೇಂದ್ರ ಒತ್ತಾಯಿಸಿದರು.
ನಗರಸಭೆಯ ಅಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -