ಮಾರುಕಟ್ಟೆಯಲ್ಲಿ ಕುರಿ ಮತ್ತು ಟಗರುಗಳ ವಾಸ್ತವ ಬೆಲೆ ಕುರಿತು ಮಾಹಿತಿ ಸಂಗ್ರಹಣೆಗಾಗಿ ನಬಾರ್ಡ್ ಬ್ಯಾಂಕ್ನ ಅಧಿಕಾರಿಗಳ ತಂಡ ಈಚೆಗೆ ತಾಲ್ಲೂಕಿನ ವಿವಿದೆಡೆ ಭೇಟಿ ನೀಡಿ ಕುರಿ ಸಾಕಾಣಿಕೆದಾರರಿಂದ ಬೆಲೆ ಕುರಿತು ಮಾಹಿತಿ ಪಡೆದು ತೆರಳಿದ್ದಾರೆ.
ನಬಾರ್ಡ್ ಬ್ಯಾಂಕ್ನ ಸಹಾಯಕ ಮಹಾ ಪ್ರಬಂಧಕರಾದ ಡಾ.ಅಪರ್ಣ ಕೋಲ್ತೆ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಸುಧೀರ್, ತಾಲ್ಲೂಕಿನ ಪಶು ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ.ಮುನಿನಾರಾಯಣರೆಡ್ಡಿ ಅವರ ತಂಡ ತಾಲ್ಲೂಕಿನ ಹಿತ್ತಲಹಳ್ಳಿ, ಆನೂರು, ಕೋಟಹಳ್ಳಿಯ ಕುರಿಗಳ ಫಾರಂಗಳಿಗೆ ಭೇಟಿ ನೀಡಿದ್ದರು. ಪ್ರಗತಿಪರ ಕುರಿ ಸಾಕಾಣಿಕೆದಾರರಾದ ಎಚ್.ಜಿ.ಗೋಪಾಲಗೌಡ, ವೀರಕೆಂಪಣ್ಣ, ಶ್ರೀನಿವಾಸ್ ಮತ್ತಿತರರನ್ನು ಭೇಟಿ ಮಾಡಿದ ಅಧಿಕಾರಿಗಳ ತಂಡ, ಈ ಭಾಗದಲ್ಲಿ ಹೆಚ್ಚು ಸಾಕಾಣಿಕೆ ಮಾಡುವ ನಾಟಿ, ಬನ್ನೂರು, ಚಳ್ಳಕೆರೆ ತಳಿಯ ಕುರಿಗಳ ನಿಖರ ಬೆಲೆ ಕುರಿತು ಮಾಹಿತಿ ಪಡೆದರು.
ನಬಾರ್ಡ್ನ ವಿವಿದ ಯೋಜನೆಯಡಿ ಬ್ಯಾಂಕುಗಳ ಮೂಲಕ ಕುರಿ ಮತ್ತು ಟಗರುಗಳ ಖರೀದಿಗಾಗಿ ಕೇವಲ ೨೫೦೦ ರೂ.(ಒಂದು ಯೂನಿಟ್ಗೆ) ನೀಡುತ್ತಿದ್ದು ಅಷ್ಟು ಕಡಿಮೆ ಹಣಕ್ಕೆ ಕುರಿ ಮತ್ತು ಟಗರುಗಳನ್ನು ಖರೀದಿಸಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಬೇಕೆಂದು ಬೋದಗೂರಿನ ಸಿರಿ ಸಮೃದ್ಧಿ ರೈತ ಕೂಟದವರು ನಬಾರ್ಡ್ ಬ್ಯಾಂಕಿನ ಅಧಿಕಾರಿಗಳಲ್ಲಿ ಈ ಸಂದರ್ಭದಲ್ಲಿ ಮನವಿ ಮಾಡಿದರು.
ಪ್ರತಿ ಹೆಣ್ಣು ಕುರಿಗೆ ಸಧ್ಯ ಮಾರುಕಟ್ಟೆಯಲ್ಲಿ ಸರಾಸರಿ ೫ ಸಾವಿರಕ್ಕಿಂತಲೂ ಹೆಚ್ಚು ಬೆಲೆ ಇದೆ. ಹಾಗೂ ಟಗರು ಒಂದಕ್ಕೆ ೮-–೧೨ ಸಾವಿರ ರೂಗಳಾದರೂ ಬೆಲೆ ಇದೆ. ಹಾಗಾಗಿ ಮಾರುಕಟ್ಟೆಯಲ್ಲಿನ ವೈಜ್ಞಾನಿಕವಾದ ಬೆಲೆಗೆ ಅನುಗುಣವಾಗಿ ಕುರಿ, ಟಗರುಗಳ ಖರೀಗೆ ಬ್ಯಾಂಕ್ ಸಾಲ ನೀಡುವಂತೆ ರೈತರು ಅಧಿಕಾರಿಗಳಲ್ಲಿ ಮನವಿ ಮಾಡಿದರು.
೩-–೬ ತಿಂಗಳ ಹೆಣ್ಣು ಕುರಿಗೆ ೬-–೭ ಸಾವಿರ ಹಾಗೂ ಗಂಡು(ಟಗರಿಗೆ) ಕುರಿಗೆ ೧೦ ಸಾವಿರ ರೂಪಾಯಿಗಳನ್ನು ನಿಗದಿಪಡಿಸಿ ಕಾನೂನಿನ ತಿದ್ದುಪಡಿ ಮಾಡಿ ನಬಾರ್ಡ್ ಮೂಲಕ ಬ್ಯಾಂಕ್ ಸಾಲ ನೀಡಬೇಕಾಗಿದೆ ಎಂದು ವಿವರಿಸಿದರು.
ಇದೀಗ ರೇಷ್ಮೆಗೂಡಿನ ಬೆಲೆ ಕುಸಿದಿದ್ದು ಬಹುತೇಕ ರೈತರು ರೇಷ್ಮೆ ಬೆಳೆಯನ್ನು ಬೆಳೆಯುವುದನ್ನು ಬಿಟ್ಟು ಬಿಡುವ ಹಂತಕ್ಕೆ ಬಂದಿದ್ದು, ಕುರಿ ಸಾಕಾಣಿಕೆಯಿಂದ ಮಾತ್ರವೇ ರೈತರು ಒಂದಷ್ಟು ಹಣವನ್ನು ಕಾಲ ಕಾಲಕ್ಕೆ ಗಳಿಸುವಂತಾಗಿದೆ. ಹಾಗಾಗಿ ಕುರಿ ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ನೀಡಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿ ಕ್ರಮ ತೆಗೆದುಕೊಳ್ಳಬೇಕೆಂದು ನಬಾರ್ಡ್ ಅಧಿಕಾರಿಳಿಗೆ ಸಧ್ಯದ ರೈತರ ಪರಿಸ್ಥಿತಿಯನ್ನು ವಿವರಿಸಿದರು.
ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತ ಹಿತ್ತಲಹಳ್ಳಿ ಗೋಪಾಲಗೌಡ, ಸಿರಿ ಸಮೃದ್ಧಿ ರೈತ ಕೂಟದ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಸ್ವಾಮಿ ವಿವೇಕಾನಂದ ರೈತ ಕೂಟದ ಅಧ್ಯಕ್ಷ ರಾಮಾಂಜಿನಪ್ಪ ಮತ್ತಿತರರು ಹಾಜರಿದ್ದರು.