ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ ಅವರು ಗುರುವಾರ ರೇಷ್ಮೆ ಇಲಾಖೆಯ ಅಧಿಕಾರಿಗಳೊಂದಿಗೆ ರೇಷ್ಮೆ ಕೃಷಿ ಮತ್ತು ರೇಷ್ಮೆ ಗೂಡಿನ ವಿವಿಧ ಹಂತಗಳ ಬೆಳೆಗಳನ್ನು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಪರಿಶೀಲಿಸಿದರು.
ತಾಲ್ಲೂಕಿನ ಬೆಳ್ಳೂಟಿ ವೆಂಕಟೇಶ್ ಅವರ ಚಾಕಿ ಸಾಕಾಣಿಕಾ ಕೇಂದ್ರ, ಬೆಳ್ಳೂಟಿ ಗ್ರಾಮದ ವಿವಿಧ ರೈತರ ಹುಳು ಸಾಕಾಣಿಕಾ ಮನೆಗಳು, ಹಿತ್ತಲಹಳ್ಳಿಯ ಎಚ್.ಕೆ.ಸುರೇಶ್ ಮತ್ತು ಎಚ್.ಜಿ.ಗೋಪಾಲಗೌಡ ಅವರ ಹಿಪ್ಪುನೇರಳೆ ತೋಟಗಳು, ರೇಷ್ಮೆ ಗೂಡಿನ ಮಾರುಕಟ್ಟೆಗೆ ಭೇಟಿ ನೀಡಿ ರೇಷ್ಮೆ ಕೃಷಿಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ರೈತರು ಇಲಾಖೆಯಿಂದ ಔಷಧಿಗಳನ್ನು ವಿತರಿಸುವಂತೆ ಕೋರಿದರು.
ಜಿಲ್ಲಾ ಪಂಚಾಯತಿ ರೇಷ್ಮೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ್, ಗ್ರೇನೇಜ್ ವಿಭಾಗದ ಉಪನಿರ್ದೇಶಕ ಮಹಾಲಿಂಗಪ್ಪ, ಸಹಾಯಕ ನಿರ್ದೇಶಕ ಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.