ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 347ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.
ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಸೋಮವಾರ ಪ್ರಾರಂಭವಾಯಿತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆಯಿತು. ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಉತ್ಸವವನ್ನು ನೆರವೇರಿಸಲಾಯಿತು. ಸೋಮವಾರ ಸಂಜೆ ಶಾಸ್ತ್ರೀಯ ಸಂಗೀತ ಕಚೇರಿಯನ್ನು ಆಯೋಜಿಸಲಾಗಿತ್ತು.
ಮಂಗಳವಾರ ತೀರ್ಥಪ್ರಸಾದ ವಿನಿಯೋಗಿಸಿದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ರಾಯರ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಉತ್ಸವ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಮೆರವಣಿಗೆ ಹಾದು ಹೋದ ರಸ್ತೆಗಳನ್ನು ಸಾರಿಸಿ ರಂಗವಲ್ಲಿ ಹಾಕಿ ಉತ್ಸವಕ್ಕೆ ಸ್ವಾಗತ ಕೋರಲಾಗಿತ್ತು.
ದೇವಾಲಯದ ಆವರಣದಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
‘ಸುಮಾರು 30 ವರ್ಷಗಳಿಂದಲೂ ನಗರದ ರಾಯರ ಮಠದಲ್ಲಿ ಮೂರು ದಿನಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಎಂದು ಮೂರು ದಿನಗಳ ಕಾಲ ನಡೆಯುವ ಆರಾಧನೆಯಲ್ಲಿ ಹೋಮ ಹವನಗಳು, ರಾಯರ ಕಥೆಯನ್ನು ತಿಳಿಸುಕೊಡುವುದು, ವಿಶೇಷ ಪೂಜೆಗಳು, ಭಜನೆ, ಗೀತಗಾಯನಗಳನ್ನು ಆಯೋಜಿಸಲಾಗುತ್ತದೆ. ರಾಯರು ಭಕ್ತಿಯಿಂದ ಪೂಜಿಸುತ್ತಿದ್ದ ರಾಮ, ಕೃಷ್ಣ, ವೇದವ್ಯಾಸ, ಲಕ್ಷ್ಮೀನರಸಿಂಹ ಮತ್ತು ಹಯಗ್ರೀವ ದೇವರುಗಳನ್ನು ಪೂಜಿಸಲಾಗುತ್ತದೆ. ಸರ್ವರಿಗೂ ಸಲ್ಲುವ ರಾಯರ ಮಹಿಮೆಯನ್ನು ಎಲ್ಲರಿಗೂ ಸಾರುವ ಉದ್ದೇಶದಿಂದ ಸಂಜೆಗೆ ದೇವರನಾಮಗಳು ಹಾಗೂ ಶ್ರೀರಾಘವೇಂದ್ರ ವಿಜಯ ಹರಿಕಥೆಯನ್ನು ಆಯೋಜಿಸಿದ್ದೇವೆ’ ಎಂದು ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ವಾಸುದೇವರಾವ್ ತಿಳಿಸಿದರು.
ಬ್ರಾಹ್ಮಣ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ಬಿ.ಕೃಷ್ಣಮೂರ್ತಿ, ಉದಯ್, ಸತೀಶ್, ಹರೀಶ್, ಬಿ.ಆರ್.ನಟರಾಜ್, ಶ್ರೀವತ್ಸ, ವೆಂಕಟೇಶ್, ವೈಶಾಖ್, ಪ್ರಕಾಶ್, ದೇವರಮಳ್ಳೂರು ವೆಂಕೋಬರಾವ್, ಡಿಲಕ್ಸ್ ವೆಂಕೋಬರಾವ್, ಗುರು, ನಾಗರಾಜ್, ಶ್ರೀನಿವಾಸಮೂರ್ತಿ, ಸತ್ಯನಾರಾಯಣರಾವ್ ಹಾಜರಿದ್ದರು.