ತಾಲ್ಲೂಕಿನಲ್ಲಿ ರಸ್ತೆಯಂಚಿನಲ್ಲಿ ಬೆಳೆಯುವ ಗುಲ್ಮೊಹರ್ ಮರಗಳು ಉಜ್ವಲ ಕೆಂಬಣ್ಣದ ಹೂಗಳನ್ನು ಅರಳಿಸಿದ್ದು ದಾರಿಹೋಕರಿಗೆ ನೆರಳು, ತಂಪಿನೊಂದಿಗೆ ಆನಂದವನ್ನೂ ನೀಡುತ್ತಿದೆ.
ಶಿಡ್ಲಘಟ್ಟ ದಿಬ್ಬೂರಹಳ್ಳಿ ರಸ್ತೆಯಲ್ಲಿ ಹನುಮಂತಪುರ ಗೇಟ್ ಬಳಿ ಬೆಳೆದಿರುವ ಈ ಮರಗಳು ದೂರದಿಂದಲೇ ನೀಲಿ ಆಗಸದ ಹೊಂದಿಕೆಯಲ್ಲಿ ಕೆಂಪುಬಣ್ಣದಿಂದ ಆಹ್ಲಾದವನ್ನು ಉಂಟುಮಾಡುತ್ತಿದೆ. ಸಾಮಾನ್ಯವಾಗಿ ವರ್ಷದ ಕಡುಬಿಸಿಲಿರುವ ಸಮಯದಲ್ಲಿ ಮುಂಗಾರಿಗೆ ಮುಂಚೆ ರಸ್ತೆ ಬದಿಯಲ್ಲಿ ಜ್ವಾಲೆಯಂತಹ ಹೂಗೊಂಚಲಿನ ಗುಲ್ಮೊಹರನ್ನು ಕಾಣಬಹುದು. ರಸ್ತೆಯ ಬದಿಯ ಹೆದ್ದಾರಿ ಮರಗಳಲ್ಲೊಂದಾದ ಈ ವೃಕ್ಷ ಸೌಂದರ್ಯಯುಕ್ತವಾದುದು.
ಈ ಮರದ ವೈಜ್ಞಾನಿಕ ಹೆಸರು ಡೆಲೋನಿಕ್ಸ್ ರೆಜಿಯಾ ರಾಫ್. ಡೆಲೋನಿಕ್ಸ್ ಎಂದರೆ “ಸ್ಪಷ್ಟವಾದ ಇಕ್ಕಳ ಅಥವಾ ಉಗುರು ಹೊಂದಿದ” ಎಂದರ್ಥ. ಇದು ಹೂವಿನ ಎಸಳಿನ ಆಕಾರವನ್ನು ಸೂಚಿಸುತ್ತದೆ. ಮಕ್ಕಳು ಇದನ್ನು ಬಳಸಿ ‘ಕೋಳಿ ಪಂದ್ಯ’ ಎಂಬ ಆಟವಾಡುತ್ತಾರೆ. ಹಿಂದಿಯಲ್ಲಿ ಈ ಮರವನ್ನು ಗುಲ್ಮೊಹರ್ ಎನ್ನುವರು. ಗುಲ್ ಎಂದರೆ ಗುಲಾಬಿ ಅಥವಾ ಹೂವು. ಮೋರ್ ಅಂದರೆ ನವಿಲು. ನವಿಲು ಗುಲಾಬಿ ಗುಲ್ಮೊಹರ್ ಎಂದಾಗಿದೆ. ಇಂಗ್ಲಿಷ್ ನಲ್ಲಿ ಫ್ಲಾಂಬೊಯಾಂಟ್, ರಾಯಲ್ ಗೋಲ್ಡ್ ಮೊಹರ್, ರಾಯಲ್ ಪೀಕಾಕ್ ಫ್ಲವರ್, ಫೈರ್ ಟ್ರೀ ಎನ್ನುತ್ತಾರೆ. ಈಸ್ಟರ್ ಉತ್ಸವವು ಆದ ೫೦ ದಿನಗಳ ಬಳಿಕ ಪೆಂಟೆಕಾಸ್ಟ್ ಹಬ್ಬದ ಹೊತ್ತಿಗೆ ಈ ಮರದ ಹೂಗಳು ಅರಳುತ್ತವೆಂದು ಕ್ರಿಶ್ಚಿಯನ್ನರು ಇದಕ್ಕೆ ಪೆಂಟೆಕಾಸ್ಟ್ ಟ್ರೀ ಎಂದು ಕರೆಯುವರು.
ಏಪ್ರಿಲ್ ಕೊನೆ ಮತ್ತು ಮೇ ತಿಂಗಳಿನಲ್ಲಿ ಹೂವರಳುವುದರಿಂದ ಮೇ ಫ್ಲವರ್ ಎಂದೂ ಕರೆಯುವರು. ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಇದು ಕೆಂಬಣ್ಣದಿಂದ ಹೋರಾಟದ, ಶ್ರಮದಾನದ ಮತ್ತು ಕಾರ್ಮಿಕರ ಸಂಕೇತವಾಗಿ ಕೆಂಬಣ್ಣವನ್ನು ಪ್ರತಿಧ್ವನಿಸುತ್ತದೆ. ಇದರ ಕಾಯಿಗಳು ಕತ್ತಿಯಂತೆ ಉದ್ದ ಮತ್ತು ಅಗಲವಿರುವುದರಿಂದ ಈ ಮರವನ್ನು ಕತ್ತಿಕಾಯಿ ಮರವೆಂದೂ ಕರೆಯುತ್ತಾರೆ.
ಈ ಮರದ ಮೂಲ ಮಡಗಾಸ್ಕರ್. ಮಾರಿಷಿಯಸ್ ಮೂಲಕ ಭಾರತಕ್ಕೆ ಇದು ಬಂದಿದೆ. ಹೂ ಬಿಡುವ ಸ್ವಲ್ಪ ಮುಂಚಿತವಾಗಿ ಈ ಮರದ ಎಲೆಗಳು ಉದುರುತ್ತವೆ. ಗೊಂಚಲುಗಳಲ್ಲಿ ಹೂ ಬಿಟ್ಟಾಗ ಕೆಂಪುಬಣ್ಣದಿಂದ ಕಂಗೊಳಿಸುವ ಮರವನ್ನು ‘ಬೆಂಕಿಮರ’ವೆಂದೇ ಕರೆಯುತ್ತಾರೆ. ಉರ್ದು ಕವಿತೆಗಳಲ್ಲಿ ಗುಲ್ಮೊಹರ್ ವಿಶೇಷ ಪ್ರತಿಮೆಯಾಗಿ ರೂಪಕವಾಗಿ ಬಳಸಲಾಗಿದೆ.
‘ಮುಂಗಾರಿನ ಮುನ್ಸೂಚನೆಯಾಗಿ ಅರಳುವ ಗುಲ್ಮೊಹರ್ ಹೂಗಳು ಬೇಸಿಗೆಯ ಬಿಸಿಯಲ್ಲೂ ಮನಕ್ಕೆ ತಂಪನ್ನೆರೆಯುತ್ತವೆ. ದಾರಿಹೋಕರಿಗೆ ನೆರಳು, ದನಗಳಿಗೆ ಇದರ ಎಲೆ ಆಹಾರ ಹಾಗೂ ಹಲವು ಹಕ್ಕಿಗಳು ಮತ್ತು ಜೇನುಗಳಿಗೆ ಮಧು ನೀಡುತ್ತದೆ ಈ ಮರ. ರಸ್ತೆ ಬದಿಯಲ್ಲಿ ಈ ರೀತಿಯ ಮರಗಳನ್ನು ನೆಡುವ ಸಂಸ್ಕೃತಿ ಹೆಚ್ಚಾಗಬೇಕು’ ಎನ್ನುತ್ತಾರೆ ಶಿಕ್ಷಕ ಕೃಷ್ಣಪ್ಪ.