Home News ಮೇಲೂರಿನ ಪುರಾಣಪ್ರಸಿದ್ಧ ಗಂಗಾದೇವಿಯ ಬ್ರಹ್ಮರಥೋತ್ಸವ

ಮೇಲೂರಿನ ಪುರಾಣಪ್ರಸಿದ್ಧ ಗಂಗಾದೇವಿಯ ಬ್ರಹ್ಮರಥೋತ್ಸವ

0

ಪುರಾಣ ಪ್ರಸಿದ್ದ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು. ಗ್ರಾಮದ ಮುಖಂಡರುಗಳು ಹಾಗೂ ಯುವಕರು ರಥೋತ್ಸವಕ್ಕೆ ಚಾಲನೆ ನೀಡಿದರು.
ತಾಲ್ಲೂಕಿನ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮೇಲೂರಿನ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯವನ್ನು ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ವಿವಿಧ ಜಾನಪದ ಕಲಾತಂಡಗಳು, ತಮಟೆಗಳ ವಾದನ, ಗಾರುಡಿ ಬೊಂಬೆಗಳ ನರ್ತನಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.
ಬ್ರಹ್ಮರಥೋತ್ಸವದ ಅಂಗವಾಗಿ ಹೋಮಕುಂಡವನ್ನು ಸ್ಥಾಪನೆ ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು, ಗಂಗಾದೇವಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ದವನದೊಂದಿಗಿನ ಬಾಳೇ ಹಣ್ಣು ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳಿಗೆ ಕೋಸಂಬರಿ ಪಾನಕಗಳನ್ನು ವಿತರಿಸಲಾಯಿತು. ದೇವಾಲಯದಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಗ್ರಾಮದ ಮುಖಂಡರಾದ ಬಿ.ಎನ್.ರವಿಕುಮಾರ್, ಆರ್.ಎ.ಉಮೇಶ್, ಕೆ.ಮಂಜುನಾಥ್, ಕೆ.ಎಸ್.ಮಂಜುನಾಥ್, ಸುದರ್ಶನ್, ಧಮೇಂದ್ರ, ಸುದೀರ್, ಶ್ರೀನಿವಾಸಮೂರ್ತಿ(ಪುಲಿ), ಕೆ.ಎನ್.ಬಚ್ಚೇಗೌಡ, ರಾಮಕೃಷ್ಣಪ್ಪ, ಶಿವಕುಮಾರ್, ಜೇಜೇಗೌಡ, ಅಶ್ವಥ್ಥಪ್ಪ, ಮುನಿಶಾಮಪ್ಪ, ಎಂ.ಜೆ.ಶ್ರೀನಿವಾಸ್ ಮತ್ತು ದೇವಾಲಯದ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಯುವಕರು ಹಾಜರಿದ್ದರು.