ತಾಲ್ಲೂಕಿನಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಡೆಸಿದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಿಯಟಿಯು ಸಂಯೋಜಿತ ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯತಿ ನೌಕರರ ಸಂಘ, ಡಿ ವೈ ಎಫ್ ಐ, ರೈತ ಸಂಘ ಮುಂತಾದ ಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನಾ ಬೆರವಣಿಗೆ ನಡೆಸಿದರು.
ಹೋಟೆಲ್, ಅಂಗಡಿ ಮುಂಗಟ್ಟುಗಳು, ಥಿಯೇಟರ್, ಬ್ಯಾಂಕುಗಳು, ಶಾಲಾ ಕಾಲೇಜುಗಳು ಬಂದ್ ಆದ್ದರಿಂದಾಗಿ ನಗರದ ರಸ್ತೆಗಳು ಬಿಕೋ ಎನ್ನುತ್ತಿತ್ತು.
ಬಸ್, ಆಟೋ ಸಂಚಾರವಿಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಬಸ್ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿದ ವಿವಿಧ ಸಂಘಟನೆಗಳ ಸದಸ್ಯರು ರಸ್ತೆಯಲ್ಲೇ ಅಡುಗೆ ತಯಾರಿಸಿದರು. ಖಾಸಗಿ ವಾಹನಗಳನ್ನು ಈ ಮಾರ್ಗದಲ್ಲಿ ತಡೆಯಲಾಗಿತ್ತು.
ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮದ್ಯಾಹ್ನ ಬಿಸಿಯೂಟ ತಯಾರಿಸುವ ಅಡುಗೆ ನೌಕರರ ಹಲವು ಸಮಸ್ಯೆಗಳನ್ನು ಕಳೆದ ಹಲವಾರು ವರ್ಷಗಳಿಂದಲೂ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ, ಬೆಲೆ ಏರಿಕೆಯ ವಿರುದ್ಧ, ಕನಿಷ್ಠ ಕೂಲಿ ೧೮ ಸಾವಿರ ರೂಪಾಯಿಗಳ ವೇತನ ನೀಡಬೇಕು. ಅಂಗನವಾಡಿ ನೌಕರರು ದುಡಿಯುತ್ತಿರುವ ಸ್ಥಳಗಳಲ್ಲಿ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದರೂ ಕೂಡಾ ಇಲಾಖೆಯಿಂದ ಯಾವುದೇ ಭದ್ರತೆಯನ್ನು ನೀಡುತ್ತಿಲ್ಲ. ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕನಿಷ್ಠ ವೇತನವನ್ನು ನೀಡಬೇಕೆಂಬ ನಿಯಮವಿದ್ದರೂ ಕೂಡಾ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ತಿಂಗಳು ಪೂರ್ತಿ ದುಡಿದರೂ ಕೂಡಾ ನೀಡುವಂತಹ ಗೌರವಧನವನ್ನು ನಿಗದಿತ ಸಮಯದಲ್ಲಿ ನೀಡುತ್ತಿಲ್ಲ. ಪಿಂಚಣಿಯನ್ನು ನಿಲ್ಲಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮಿಷನ್ ಮೋಡ್ ವಿರೋಧಿಸಿ, 45ನೇ ಐ.ಎಲ್.ಸಿ ಶಿಫಾರಸ್ಸುಜಾರಿಗಾಗಿ ಒತ್ತಾಯಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಂಗನವಾಡಿ ನೌಕರರ ವಿರೋಧಿ ನೀತಿಗಳ ವಿರುದ್ಧ, ನಿವೃತ್ತಿ ಆದವರಿಗೆ ಇಡಿಗಂಟು ಪೆನ್ಷನ್ ಮುಂದುವರಿಸಲು ಒತ್ತಾಯಿಸಿ ಮುಷ್ಕರ ನಡೆಸುತ್ತಿರುವುದಾಗಿ ಮುಷ್ಕರ ನಿರತರು ತಿಳಿಸಿದರು.
ಸಿ.ಐ.ಟಿ.ಯು ತಾಲ್ಲೂಕು ಅಧ್ಯಕ್ಷ ಸಿ.ಎಸ್.ಸುದರ್ಶನ್, ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ, ಕೆ.ಎನ್.ಪಾಪಣ್ಣ, ಗುಲ್ಜಾರ್, ಶಂಕರಣ್ಣ, ದ್ಯಾವಪ್ಪ, ಗಂಗಪ್ಪ, ಜನಾರ್ಧನ್, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ಬಿಸಿಯೂಟ ನೌಕರರ ಸಂಘದ ಮುನಿಲಕ್ಷ್ಮಮ್ಮ, ಡಿ ವೈ ಎಫ್ ಐ ಮುನೀಂದ್ರಮ ಫಯಾಜ್, ಆಶಾಕಾರ್ಯಕರ್ತೆಯರ ಸಂಘದ ಸೌಭಾಗ್ಯ, ಟಿ ಎಸ್ ಎಸ್ ಮೌಲಾ, ಸತ್ತಾರ್ಸಾಬ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.