ಖಾಸಗಿ ಶಾಲೆಗಳಲ್ಲಿ ಸ್ಮಾರ್ಟ್ ಬೋರ್ಡ್ ಬಳಸುತ್ತಾರೆ. ವಿದ್ಯಾರ್ಥಿಗಳ ಕಲಿಕೆಗೆ ಇದು ಸಹಕಾರಿ. ಆದರೆ ಸರ್ಕಾರಿ ಶಾಲೆಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಇದು ಅಪರೂಪ.
ಇದಕ್ಕೆ ಅಪವಾದವೆಂಬಂತೆ ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಸಲಾಗಿದೆ. ವಿಶೇಷವೆಂದರೆ ಗ್ರಾಮೀಣ ಭಾಗದಲ್ಲಿ ಸದಾ ಕೈಕೊಡುವ ವಿದ್ಯುತ್ ಮೇಲೆ ಅವಲಂಬಿತವಾಗದೆ ಸೋಲಾರ್ ಶಕ್ತಿಯಿಂದ ಇದು ಕಾರ್ಯನಿರ್ವಹಿಸುತ್ತಿದೆ.
ಬಣ್ಣ ಬಣ್ಣದ ಮಾದರಿಗಳು, ಆನಿಮೇಶನ್, ವೀಡಿಯೊ ಮುಂತಾದವುಗಳ ಮೂಲಕ ಸ್ಮಾರ್ಟ್ ಬೋರ್ಡ್ ಮೂಲಕ ಪಾಠ ಮಾಡಲಾಗುತ್ತಿದೆ. ಇದರಿಂದ ಕಲಿಸುವ ಪಾಠವು ಬೇಗ ಅರ್ಥವಾಗುತ್ತದೆ ಹಾಗೂ ನೆನಪಿನಲ್ಲಿರುತ್ತದೆ. ಕಲಿಕೆಯ ದೃಷ್ಟಿಯಿಂದ ಒಳ್ಳೆಯ ಅಭಿಪ್ರಾಯ ಇರುವ ಇದನ್ನು ಈಗಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೂ ಸಹ ಸಮ್ಮತಿಸಿದ್ದಾರೆ. ಈಗಾಗಲೆ ಹಲವಾರು ಖಾಸಗಿ ಶಾಲಾ ಕಾಲೇಜುಗಳಲ್ಲಿ ಈ ತಂತ್ರಜ್ಞಾನವನ್ನು ಉಪಯೋಗಿಸುತ್ತಿದ್ದಾರೆ. ಆದರೆ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆ ಇದನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲು ಅಡಚಣೆಯಾಗಿದೆ. ಅದನ್ನು ಸೌರವಿದ್ಯುತ್ ಬಳಸಿ ಮೀರಬಹುದಾಗಿದೆ ಎನ್ನುವುದಕ್ಕೆ ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.
‘ಸೆಲ್ಕೋ ಕಂಪೆನಿಯವರನ್ನು ‘ನಮ್ಮ ಮುತ್ತೂರು ಸಂಸ್ಥೆ’ಯವರು ಕರೆತಂದು ನಮ್ಮ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸನ್ನು ರೂಪಿಸಿಕೊಟ್ಟಿದ್ದಾರೆ. ಇದರಿಂದ ಮಕ್ಕಳಿಗೆ ಸಾಕಷ್ಟು ಉಪಯೋಗವಾಗುತ್ತಿದೆ. ಪರಿಸರ ಅಧ್ಯಯನ, ಗಣಿತ, ಇಂಗ್ಲೀಷ್ ಮುಂತಾದ ಎಲ್ಲಾ ವಿಷಯಗಳ ಹೊಸ ಪಠ್ಯಕ್ರಮದ ವಿಷಯಗಳನ್ನು ಚಿತ್ರ ರೂಪದಲ್ಲಿ ಪ್ರದರ್ಶಿಸಿ ವಿವರಿಸಲಾಗುತ್ತದೆ. ಕೇಳಿದ ಶಬ್ಧ ಹಾಗೂ ನೋಡಿದ ಚಿತ್ರವನ್ನು ಮಗು ಮರೆಯುವುದಿಲ್ಲ. ಪಠ್ಯಪುಸ್ತಕದಲ್ಲಿ ಎಲ್ಲ ಚಿತ್ರಗಳೂ ಇರುವುದಿಲ್ಲ. ಆದರೆ ಕಪ್ಪು ಹಲಗೆಯ ಮೇಲೆ ಬರೆದು ತೋರಿಸುವುದಕ್ಕಿಂತ ಇಲ್ಲಿ ಅದೇ ಪಠ್ಯವನ್ನು ಚಿತ್ರ ಹಾಗೂ ವೀಡಿಯೋ ಮೂಲಕ ತೋರಿಸಿ ಕಲಿಸಲಾಗುತ್ತದೆ. ಮಕ್ಕಳು ಅತ್ಯಂತ ಕುತೂಹಲ ಮತ್ತು ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಎಲ್ಲ ವರ್ಗದ ವಿದ್ಯಾರ್ಥಿಗಳೂ ಸಹ ಏಕರೂಪ ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಇದು ಸಹಾಯವಾಗುತ್ತದೆ’ ಎಂದು ಶಿಕ್ಷಕ ಎಸ್.ದಾವೂದ್ ಪಾಷ ತಿಳಿಸಿದರು.
- Advertisement -
- Advertisement -
- Advertisement -
- Advertisement -