ಕೊರೊನಾ ತಡೆಗಟ್ಟಲು ಮಾಡಿರುವ ಲಾಕ್ ಔಟ್ ಪರಿಣಾಮ ಮಾರುಕಟ್ಟೆಯಿಲ್ಲದೆ ಹಲವಾರು ರೈತರು ಕಂಗೆಟ್ಟಿದ್ದಾರೆ. ತಾಲ್ಲೂಕಿನ ತಲದುಮ್ಮನಹಳ್ಳಿ ಗ್ರಾಮದ ರೈತ ಬಚ್ಚೇಗೌಡ ತಾನು ಬೆಳೆದಿದ್ದ ಚೆಂಡು ಹೂವಿನ ಗಿಡಗಳನ್ನು ಹೂವಿನ ಸಮೇತ ರೋಟರಿ ಹಾಕಿ ಉತ್ತುಬಿಟ್ಟಿದ್ದಾರೆ.
ಎರಡು ಎಕರೆ ಪ್ರದೇಶದಲ್ಲಿ ರೈತ ಬಚ್ಚೇಗೌಡ ಚೆಂಡು ಹೂಗಿಡಗಳನ್ನು ಬೆಳೆದಿದ್ದರು. ಒಮ್ಮೆ ಮಾತ್ರ ಹೂಗಳ ಕಟಾವು ಮಾಡಿದ್ದರು. ಅಷ್ಟರಲ್ಲಿ ಕೊರೊನಾ ಮಾರಿ ಆವರಿಸಿತು. ಅದನ್ನು ತಡೆಯಲು ಎಲ್ಲೆಡೆ ಲಾಕ್ ಔಟ್ ಮಾಡಲಾಯಿತು. ಅದರ ಪರಿಣಾಮ ಹೂಗಳನ್ನು ಬೆಳೆದವರ ಮೇಲೆ ಆಯಿತು. ಹೂವನ್ನು ಕೀಳುವ ಕೂಲಿ ಕೂಡ ಗಿಟ್ಟುವುದಿಲ್ಲವೆಂದು ಅವರು ಹಾಗೆಯೇ ಬಿಟ್ಟರು. ಈಗ ಗಿಡ ಸಮೇತ ಉಳುಮೆ ಮಾಡುತ್ತಿದ್ದಾರೆ.
“ನಾರಿಗೆ 50 ಸಾವಿರ ರೂ, ಗೊಬ್ಬರಕ್ಕೆ 40 ಸಾವಿರ ರೂ, ಕೂಲಿ ಔಷಧಿಗೆ 30 ಸಾವಿರ ರೂ ಖರ್ಚು ಮಾಡಿರುವೆ. ಈಗ ಹೂವನ್ನು ಕೇಳುವವರಿಲ್ಲ. ಅದಕ್ಕೆ ಟ್ರಾಕ್ಟರಿಗೆ ರೋಟರಿ ಹಾಕಿ ಉತ್ತುತ್ತಿರುವೆ. ಇದಲ್ಲದೆ, ಒಂದು ಎಕರೆಯಲ್ಲಿ ಐಶ್ವರ್ಯ ತಳಿಯ ಶಾಮಂತಿ ಹೂ ಬೆಳೆದಿರುವೆ, ಅದು ಇನ್ನೂ ಹೂ ಬಿಟ್ಟಿಲ್ಲ. ಮಾರಿಗೋಲ್ಡ್ ಹೂವನ್ನು ಸಹ ಮುವ್ವತ್ತು ಗುಂಟೆಯಲ್ಲಿ ಬೆಳೆದಿರುವೆ. ಜೊತೆಗೆ ಒಂದೂಕಾಲು ಎಕರೆಯಲ್ಲಿ ಚೆಂಡು ಹೂವಿನ ನಾರು ಹಾಕಲೆಂದು ಭೂಮಿಯನ್ನು ಸಿದ್ಧಪಡಿಸಿರುವೆ. ಒಟ್ಟಾರೆ ಹತ್ತರಿಂದ ಹದಿನೈದು ಲಕ್ಷ ನಷ್ಟ ಆಗುತ್ತಿದೆ. ರೈತರು ಎಚ್ಚೆತ್ತುಕೊಳ್ಳುವುದು ಕಷ್ಟವಿದೆ” ಎಂದು ರೈತ ಬಚ್ಚೇಗೌಡ ತಿಳಿಸಿದರು.